newsics.com
ಕನ್ನಡ ಸೇರಿದಂತೆ ಭಾರತದ ಹಲವು ಭಾಷೆಗಳಲ್ಲಿ ಹಲವು ಅತ್ಯುತ್ತಮ ಹಾಡುಗಳನ್ನು ಹಾಡಿರುವ ಗಾಯಕ ಜುಬೀನ್ ಗರ್ಗ್ ಸಿಂಗಪುರದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು. ಸಿಂಗಪುರದಲ್ಲಿ ಸ್ಕೂಬಾ ಡೈವಿಂಗ್ (ಆಳ ಸಮುದ್ರದಲ್ಲಿ ಈಜಾಟ) ಸಾಹಸ ಮಾಡುವಾಗ ಜುಬೀನ್ ಗರ್ಗ್ ಅಸುನೀಗಿದ್ದಾರೆ ಎನ್ನಲಾಗಿದೆ.
ಸಿಂಗಪುರದ ಸ್ಥಳೀಯ ಪೊಲೀಸರ ವರದಿಯಂತೆ ಜುಬೀನ್ ಗರ್ಗ್ ಅವರ ಮೃತದೇಹವನ್ನು ನದಿಯೊಂದರಿಂದ ಹೊರ ತೆಗೆಯಲಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಂತೆ. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ಜುಬೀನ್ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಅಸ್ಸಾಂ ಮೂಲದವರಾದ ಜುಬೀನ್ ಗರ್ಗ್ ಅವರು ಅಸ್ಸಾಮಿ ಸಿನಿಮಾಗಳ ಖ್ಯಾತ ನಟ ಆಗಿದ್ದರು. ಅಲ್ಲದೆ ಹಲವಾರು ಹಿಂದಿ, ಬೆಂಗಾಲಿ, ಅಸ್ಸಾಮಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಪಂಜಾಬಿ, ಒಡಿಯಾ, ಬೋಡೊ, ಕರ್ಬಿ, ತಿವಾ, ನೇಪಾಳಿ, ಭೋಜ್ಪುರಿ, ಭಿಷ್ಣುಪ್ರಿಯ ಮಣಿಪುರಿ ಇನ್ನೂ ಕೆಲವು ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದರು. ಎಆರ್ ರೆಹಮಾನ್ ಸೇರಿದಂತೆ ಇನ್ನೂ ಕೆಲವು ಅತ್ಯುತ್ತಮ ಸಂಗೀತ ನಿರ್ದೇಶಕರುಗಳ ಮೆಚ್ಚಿನ ಗಾಯಕರಾಗಿದ್ದರು ಜುಬೀನ್ ಗರ್ಗ್.