newsics.com
ಬೀದರ್: ಅತ್ಯಾಚಾರ ಆರೋಪ ಹೊತ್ತಿರುವ ಬಿಜೆಪಿ ಶಾಸಕ ಪ್ರಭು ಚೌಹಾಣ್ ಪುತ್ರ ಪ್ರತೀಕ್ ಚೌಹಾಣ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ವಜಾಗೊಳಿಸಿದೆ.
ಚೌಹಾಣ್ ಪುತ್ರನ ಪರ ವಕೀಲ ಎಂ.ಎಂ.ಗೋಡ್ಬಲೆಯವರು ನಿರೀಕ್ಷಣಾ ಜಾಮೀನಿಗಾಗಿ ಮಂಗಳವಾರ (ಜು.29) ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ್ದ ಕೋರ್ಟ್ ಗುರುವಾರಕ್ಕೆ (ಜು.31) ತೀರ್ಪನ್ನು ಕಾಯ್ದಿರಿಸಿತ್ತು. ಬಳಿಕ ಜಾಮೀನು ನೀಡದಂತೆ ಕೋರ್ಟ್‌ಗೆ ಸಂತ್ರಸ್ತೆ ಪರ ವಕೀಲರು ತಕರಾರು ಅರ್ಜಿ ಸಲ್ಲಿಸಿದ್ದರು. ಇದೀಗ ಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.
ಮಹಾರಾಷ್ಟ್ರದ ಉದ್ಗೀರ್ ತಾಲೂಕು ಮೂಲದ ಸಂತ್ರಸ್ತ ಮಹಿಳೆ ತಮ್ಮ ದೂರಿನಲ್ಲಿ 2023ರಲ್ಲಿ ತಮ್ಮ ಮತ್ತು ಪ್ರತೀಕ್ ಚೌಹಾಣ್ ನಡುವೆ ವಿವಾಹ ನಿಶ್ಚಿತಾರ್ಥ ನಡೆದಿತ್ತು ಎಂದು ತಿಳಿಸಿದ್ದಾರೆ. ನಿಶ್ಚಿತಾರ್ಥದ ನಂತರ, ಪ್ರತೀಕ್ ತನ್ನನ್ನು ಬೀದರ್ ಜಿಲ್ಲೆಯ ಘಮ್ಸಾಬಾಯಿ ಬೊಂಟಿ ಥಂಡಾ, ಬೆಂಗಳೂರಿನ ಲಾತೂರ್, ಶಿರಡಿ, ಬೀದರ್ ಸೇರಿದಂತೆ ಹಲವಾರು ಸ್ಥಳಗಳಿಗೆ ಕರೆದೊಯ್ದು ಮದುವೆಯಾಗುವುದಾಗಿ ನಂಬಿಸಿ ಬಲವಂತವಾಗಿ ಅತ್ಯಾಚಾರ ಮಾಡಿದ್ದಾರೆ. ಒಂದು ಸ್ಥಳದಲ್ಲಿ ಪ್ರತೀಕ್ ತನ್ನನ್ನು ಗಾಯಗೊಳಿಸಿದ್ದನು ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.