newsics.com
ಪತ್ನಿಯನ್ನು ಮರಳಿ ಪಡೆಯಲು ಮಾಂತ್ರಿಕನ ಸಲಹೆಯ ಮೇರೆಗೆ ವ್ಯಕ್ತಿಯೊಬ್ಬ ತನ್ನ ಸಂಬಂಧಿಯೇ ಆದ ಆರು ವರ್ಷದ ಬಾಲಕನನ್ನು ಹತ್ಯೆ ಮಾಡಿದ ಆಘಾತಕಾರಿ ಘಟನೆ ರಾಜಸ್ಥಾನದ ಅಲ್ವಾರದಲ್ಲಿ ನಡೆದಿದೆ.
ಮೃತ ಬಾಲಕನನ್ನು ಆರು ವರ್ಷದ ಲೋಕೇಶ್ ಎಂದು ಗುರುತಿಸಲಾಗಿದೆ.
ಬಾಲಕ ಲೋಕೇಶ್ ಜುಲೈ 19ರಿಂದ ನಾಪತ್ತೆಯಾಗಿದ್ದ, ಅದೇ ದಿನ ಸಂಜೆ ಬಾಲಕನ ಮೃತದೇಹ ಪಾಳುಬಿದ್ದ ಕಟ್ಟಡವೊಂದರ ಒಳಗೆ ಒಣಹುಲ್ಲಿನಿಂದ ಮುಚ್ಚಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಾಲಕನ ಗಂಟಲು ಸೀಳಲ್ಪಟ್ಟಿತ್ತು. ದೇಹದ ಹಲವು ಭಾಗಗಳಿಗೆ ಸಿರೀಂಜ್‌ನಿಂದ ಚುಚ್ಚಿದ ಗುರುತುಗಳಿದ್ದವು. ಈ ಮಾಂತ್ರಿಕನು ಮಾಟಮಂತ್ರ ಮಾಡುವುದಕ್ಕಾಗಿ ಬಾಲಕನ ದೇಹಕ್ಕೆ ಸಿರಿಂಜ್ ಚುಚ್ಚಿ ರಕ್ತವನ್ನು ತೆಗೆದಿರಬಹುದು ಎಂದು ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ತನಿಖೆಗಿಳಿದ ಪೊಲೀಸರು ಮೊದಲಿಗೆ ಬಾಲಕ ಲೋಕೇಶ್‌ನ ಮಾವ ಮನೋಜ್ ಕುಮಾರ್‌ನನ್ನು ಬಂಧಿಸಿದ್ದಾರೆ. ಈ ವೇಳೆ ಆರೋಪಿ ಈ ಅಪರಾಧದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೇ ಮಂತ್ರವಾದಿ ಸುನೀಲ್ ಕುಮಾರ್‌ನ ಸಲಹೆಯಂತೆ ಮಗುವನ್ನು ಕೊಂದಿದ್ದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಇದಾದ ನಂತರ ಪೊಲೀಸರು ಮಾಂತ್ರಿಕ ಸುನೀಲ್‌ನನ್ನು ಬಂಧಿಸಿದ್ದಾರೆ. ಜುಲೈ 22 ರಂದು ಸುನೀಲ್ ಹಾಗೂ ಮನೋಜ್‌ನನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.
ಮನೆಬಿಟ್ಟು ಹೋಗಿದ್ದ ಮನೋಜ್ ಹೆಂಡ್ತಿ:
ಪೊಲೀಸರು ಹೇಳುವ ಪ್ರಕಾರ, ಮನೋಜ್‌ನ ಹೆಂಡ್ತಿ ಮನೆಯಲ್ಲಿನ ಕೌಟುಂಬಿಕ ಕಲಹದಿಂದಾಗಿ ಮನೆ ಬಿಟ್ಟು ಹೋಗಿ ತನ್ನ ತಾಯಿ ಮನೆಯಲ್ಲಿ ವಾಸ ಮಾಡುತ್ತಿದ್ದಳು. ಇದರಿಂದ ಬೇಸರಗೊಂಡಿದ್ದ ಆತ ಆಕೆಯನ್ನು ಹೇಗಾದರೂ ಮನೆಗೆ ಕರೆಸಿಕೊಳ್ಳಬೇಕು ಎಂದು ಮಂತ್ರವಾದಿಯ ಬಳಿ ಹೋಗಿದ್ದಾನೆ. ಈ ವೇಳೆ ಮಂತ್ರವಾದಿ ಸುನೀಲ್ ಸಮಸ್ಯೆ ಪರಿಹರಿಸುವುದಕ್ಕೆ 12,000 ರೂಪಾಯಿ ನೀಡುವಂತೆ ಮನೋಜ್‌ಗೆ ಕೇಳಿದ್ದಾನೆ. ಜೊತೆಗೆ ಈ ಸಮಸ್ಯೆಯನ್ನು ಪರಿಹರಿಸಲು ಮಾಡುವ ತಂತ್ರಕ್ಕೆ ಮಗುವಿನ ರಕ್ತ ಹಾಗೂ ಕಿಡ್ನಿ ಬೇಕು ಎಂದು ಹೇಳಿದ್ದಾನೆ ಇದಕ್ಕೆ ಮನೋಜ್ ಒಪ್ಪಿದ್ದಾನೆ.