newsics.com
ಭೋಪಾಲ್: ತನ್ನ ಲಿವ್ ಇನ್ ಗೆಳತಿಗೆ ಏನೋ ಕಚ್ಚಿದೆ ಎಂದು ಆಕೆಯನ್ನು ಹೊತ್ತುಕೊಂಡು ಬಂದ ಯುವಕ ಆಸ್ಪತ್ತೆಯೊಂದರ ಬಾಗಿಲ ಬಳಿ ಆಕೆಯನ್ನು ಬಿಟ್ಟು ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.
ಗಂಭೀರ ಸ್ಥಿತಿಯಲ್ಲಿದ್ದ ತನ್ನ ಲಿವ್ ಇನ್ ಸಂಗಾತಿಯನ್ನು ಆಸ್ಪತ್ರೆಗೆ ದಾಖಲಿಸಿದ ಪ್ರಿಯಕರ, ತಕ್ಷಣದಿಂದ ಅಲ್ಲಿಂದ ಪರಾರಿಯಾಗಿದ್ದಾನೆ.
ಮೃತ ಮಹಿಳೆಯನ್ನು ಸೋನಿ ಎಂದು ಗುರುತಿಸಲಾಗಿದೆ. ಆಕೆಯನ್ನು ಗ್ವಾಲಿಯರ್ನ ಮುರಾರ್ನಲ್ಲಿರುವ ಜಿಲ್ಲಾಸ್ಪತ್ರೆಗೆ ಕರೆತಂದು, ನಕಲಿ ಹೆಸರು ಮತ್ತು ವಿಳಾಸವನ್ನು ನೀಡಿ, ದಾಖಲು ಮಾಡಿಸಿ, ತಕ್ಷಣ ಪ್ರಿಯಕರ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಸೋನಿ ಸಾವಿಗೀಡಾಗಿದ್ದಾಳೆ. ಈಕೆ ಬಿಹಾರದ ನಿವಾಸಿ ಎಂದು ತಿಳಿದುಬಂದಿದೆ.
ವರದಿಗಳ ಪ್ರಕಾರ, ನಿನ್ನೆ ಬೆಳಗಿನ ಜಾವ ಸೋನಿಗೆ ವಿಷಕಾರಿ ಕೀಟವೊಂದು ಕಚ್ಚಿದೆ. ಆಕೆಯ ಸ್ಥಿತಿ ಹದಗೆಡುತ್ತಿರುವುದನ್ನು ಗಮನಿಸಿದ ಆಕೆಯ ಪ್ರಿಯಕರ, ಮನೆ ಮಾಲೀಕರು ಮತ್ತು ಆಟೋ ಚಾಲಕನೊಂದಿಗೆ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದನು. ಆರಂಭದಲ್ಲಿ ಹೇಗೋ ನಕಲಿ ದಾಖಲೆ ಮತ್ತು ವಿಳಾಸ ನೀಡಿ ಆಕೆಯನ್ನು ದಾಖಲಿಸಿದನು. ಆದರೆ, ದಾಖಲೆಗಳ ಕೊರತೆ ಹಾಗೂ ಆಕೆಯ ಜೊತೆಗಿನ ತಮ್ಮ ಸಂಬಂಧದ ಬಗ್ಗೆ ಪ್ರಶ್ನೆ ಮಾಡಬಹುದು ಎಂಬ ಭಯದಿಂದ ಚಿಕಿತ್ಸೆ ನಡೆಯುವಾಗ ಆತ ಪರಾರಿಯಾಗಿದ್ದಾನೆ.
ಇನ್ನು ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಆಟೋದಲ್ಲಿ ಜಿಲ್ಲಾಸ್ಪತ್ರೆಗೆ ಕರೆತಂದ ಮೂವರು ಯುವಕರಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ಪತ್ರೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮಹಿಳೆಯನ್ನು ದಾಖಲಿಸಿ ಪರಾರಿಯಾದ ಆಟೋ ನಂಬರ್ ಮೂಲಕ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿದರು.
ವರದಿಗಳ ಪ್ರಕಾರ, ಮೂರು ವರ್ಷಗಳ ಹಿಂದೆ, ಮೃತ ಸೋನಿ ಗ್ವಾಲಿಯರ್ ರೈಲು ನಿಲ್ದಾಣದಲ್ಲಿ ಯುವಕನನ್ನು ಭೇಟಿಯಾದರು. ಮೊದಲ ಪರಿಚಯ ಕ್ರಮೇಣವಾಗಿ ಸ್ನೇಹವಾಗಿ ಬದಲಾಯಿತು. ನಂತರ ಸ್ನೇಹ ಪ್ರೀತಿಗೆ ತಿರುಗಿ, ಮದುವೆಯಾಗದೆ ಒಟ್ಟಿಗೆ ವಾಸಿಸಲು ಇಬ್ಬರು ಪ್ರಾರಂಭಿಸಿದರು. ಇಬ್ಬರೂ ಮಲನ್ಪುರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಈ ಪ್ರಕರಣದ ಬಗ್ಗೆ ಮಾತನಾಡಿರುವ ಎಸ್ಪಿ ಧರ್ಮವೀರ್ ಸಿಂಗ್, ಮಹಿಳೆಯನ್ನು ಆಸ್ಪತ್ರೆಯಲ್ಲಿ ಬಿಟ್ಟು ಓಡಿಹೋದ ಯುವಕನನ್ನು ಬಂಧಿಸಲಾಗಿದೆ. ಮೂರು ವರ್ಷಗಳಿಂದ ತಾನು ಆ ಮಹಿಳೆಯೊಂದಿಗೆ ಇದ್ದೆ ಎಂದು ಆತ ಹೇಳಿಕೊಂಡಿದ್ದಾನೆ. ಆದರೆ, ಆತನ ಬಳಿ ಮದುವೆಗೆ ಸಂಬಂಧಿಸಿದ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ.
ಪೋಸ್ ಕೊಡಲು ಹೋಗಿ ಹೊಂಡಕ್ಕೆ ಬಿದ್ದ ಸಾಮಾಜಿಕ ಕಾರ್ಯಕರ್ತ!; ವೈರಲ್ ವಿಡಿಯೋ ನೋಡಿ