newsics.com
ನಟಿ ಶೆಫಾಲಿ ಜರಿವಾಲಾ (42) ಅವರ ಆಕಸ್ಮಿಕ ನಿಧನವು ಚಿತ್ರರಂಗ ಮತ್ತು ಅಭಿಮಾನಿಗಳಲ್ಲಿ ಆಘಾತವನ್ನುಂಟು ಮಾಡಿದೆ.
ಮುಂಬೈನ ಅಂಧೇರಿಯ ಗೋಲ್ಡನ್ ರೇಸ್ ಕಟ್ಟಡದ ತಮ್ಮ ನಿವಾಸದಲ್ಲಿ ಶೆಫಾಲಿ ಅವರ ಮೃತದೇಹ ಪತ್ತೆಯಾಗಿದ್ದು, ಸಾವಿಗೆ ನಿಖರವಾದ ಕಾರಣ ಇನ್ನೂ ಬಹಿರಂಗಗೊಂಡಿಲ್ಲ.
ಪ್ರಾಥಮಿಕ ಮಾಹಿತಿಯಂತೆ ಹೃದಯಾಘಾತವೇ ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ, ಆದರೆ ಮರಣೋತ್ತರ ಪರೀಕ್ಷೆಯ ವರದಿಯ ನಂತರವೇ ಸತ್ಯ ದೃಢಪಡಲಿದೆ.
ಪೊಲೀಸರು ಹೇಳಿದ್ದೇನು?
ಮುಂಬೈ ಪೊಲೀಸರು ತಡರಾತ್ರಿ 1 ಗಂಟೆಗೆ ಶೆಫಾಲಿ ಅವರ ಮನೆಗೆ ಆಗಮಿಸಿದ್ದು, ವಿಧಿವಿಜ್ಞಾನ ತಂಡದೊಂದಿಗೆ ತನಿಖೆಯನ್ನು ಆರಂಭಿಸಿದ್ದಾರೆ. ಶೆಫಾಲಿ ಅವರ ಮೃತದೇಹವನ್ನು ಕೂಪರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಕುಟುಂಬದ ಸದಸ್ಯರ ಜೊತೆಗೆ, ಅವರ ಅಡುಗೆಯವರು ಮತ್ತು ಸೇವಕಿಯನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಮುಂಬೈ ಪೊಲೀಸರ ಹೇಳಿಕೆಯಂತೆ, ‘ಅಂಧೇರಿಯ ಶೆಫಾಲಿ ಅವರ ನಿವಾಸದಲ್ಲಿ ಮೃತದೇಹ ಪತ್ತೆಯಾಗಿದೆ. ಸಾವಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ, ಮರಣೋತ್ತರ ಪರೀಕ್ಷೆಯ ವರದಿಯನ್ನು ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೆಫಾಲಿ ತಮ್ಮ ಪತಿ ಪರಾಗ್ ತ್ಯಾಗಿ ಜೊತೆಗೆ ವಾಸಿಸುತ್ತಿದ್ದ ಕಟ್ಟಡದ ಕಾವಲುಗಾರ ಶತ್ರುಘ್ನ ಮಹಾತೋ, ನಿನ್ನೆ ರಾತ್ರಿಯ ಘಟನೆಯನ್ನು ವಿವರಿಸಿದ್ದಾರೆ.
ರಾತ್ರಿ 10-10:15ರ ಸುಮಾರಿಗೆ ಒಂದು ಕಾರು ತುಂಬಾ ವೇಗವಾಗಿ ಗೇಟ್‌ನಿಂದ ಹೊರಟಿತು. ಕಾರಿನಲ್ಲಿ ಡಾರ್ಕ್ ಗ್ಲಾಸ್‌ಗಳಿದ್ದ ಕಾರಣ ಶೆಫಾಲಿ ಇದ್ದಾರೆಯೇ ಎಂದು ಗೊತ್ತಾಗಲಿಲ್ಲ. ಹಿಂದಿನ ದಿನ ಶೆಫಾಲಿ ಅವರನ್ನು ತಮ್ಮ ಪತಿ ಮತ್ತು ನಾಯಿಯೊಂದಿಗೆ ವಾಕಿಂಗ್ ಹೋಗಿದ್ದು ನೋಡಿದ್ದೆ. ಅವರ ವರ್ತನೆ ಸಾಮಾನ್ಯವಾಗಿತ್ತು ಎಂದು ಹೇಳಿದ್ದಾರೆ.