newsics.com
ಬೆಂಗಳೂರು: ಪೊಲೀಸ್ ಅಧಿಕಾರಿಗಳ ಸಲಹೆಯನ್ನು ಧಿಕ್ಕರಿಸಿ ದಿಢೀರ್ ಆಗಿ ಆರ್‌ಸಿಬಿ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಿದ್ದೇ ಕಾಲ್ತುಳಿತ ದುರಂತಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.
ಸರ್ಕಾರ ಮತ್ತು ಆರ್‌ಸಿಬಿ ಆಡಳಿತ ಮಂಡಳಿ ಪೊಲೀಸ್ ಅಧಿಕಾರಿಗಳ ಸಲಹೆಯನ್ನು ಕಡೆಗಣಿಸಿ ಕಾರ್ಯಕ್ರಮವನ್ನು ಹಠಾತ್ತಾಗಿ ಆಯೋಜಿಸಿತ್ತು ಎಂಬುದು ತಿಳಿದುಬಂದಿದೆ.
ಹಠಾತ್ತಾಗಿ ಕಾರ್ಯಕ್ರಮ ಆಯೋಜಿಸಿದ್ದರ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಅಸಮಾಧಾನದ ಮಾತುಗಳನ್ನಾಡಿದ್ದಾರೆ.
ತಕ್ಷಣವೇ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜಿಸುವ ಬದಲು ಒಂದು ವಾರದ ನಂತರ ಮಾಡುವಂತೆ ಸಲಹೆ ನೀಡಲಾಗಿತ್ತು. ಆದರೆ ಅದನ್ನು ಕಡೆಗಣಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಫೈನಲ್‍ನಲ್ಲಿ ಆರ್‌ಸಿಬಿ ಗೆಲುವಿಗೆ ಸಂಬಂಧಿಸಿ ಬುಧವಾರ ಯಾವುದೇ ಕಾರ್ಯಕ್ರಮಗಳನ್ನು ನಡೆಸದಂತೆ ಮಂಗಳವಾರ ರಾತ್ರಿಯಿಂದಲೇ ಸರ್ಕಾರ ಮತ್ತು ಫ್ರಾಂಚೈಸಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದೆವು. ಜನರ ಭಾವನೆ, ಉದ್ವೇಗ ತುಸು ತಣ್ಣಗಾದ ನಂತರ ಕಾರ್ಯಕ್ರಮ ಆಯೋಜಿಸುವುದು ಸೂಕ್ತ ಎಂದು ಸಲಹೆ ನೀಡಿದ್ದೆವು. ಮುಂದಿನ ಭಾನುವಾರ ಕಾರ್ಯಕ್ರಮ ಆಯೋಜಿಸಲು ಶಿಫಾರಸು ಮಾಡಿದ್ದೆವು. ಆದರೆ ಇದಕ್ಕೆ ಮನ್ನಣೆ ಸಿಗಲಿಲ್ಲ.
ಆರಂಭಿಕ ಯೋಜನೆಯ ಪ್ರಕಾರ, ಆಟಗಾರರನ್ನು ವಿಧಾನಸೌಧದಿಂದ ಬಾಳೇಕುಂದ್ರಿ ವೃತ್ತಕ್ಕೆ ಮೆರವಣಿಗೆ ಮೂಲಕ ಕರೆತರಲು ಉದ್ದೇಶಿಸಲಾಗಿತ್ತು. ನಂತರ ಕಬ್ಬನ್ ರಸ್ತೆ, ಎಂಜಿ ರಸ್ತೆ ಮತ್ತು ಅಂತಿಮವಾಗಿ ಕ್ವೀನ್ಸ್ ವೃತ್ತದ ಬಳಿಯ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮೆರವಣಿಗೆ ಮೂಲಕ ಕರೆದೊಯ್ಯುವುದು ಎಂದು ಹೇಳಲಾಗಿತ್ತು. ಆದರೆ, ಯಾವುದೇ ಮೆರವಣಿಗೆಯನ್ನು ನಡೆಸಬೇಡಿ ಎಂದು ನಾವು ಮನವಿ ಮಾಡಿದ್ದೆವು. ಒಂದೇ ಸ್ಥಳದಲ್ಲಿ ಸಂಘಟಿತ ರೀತಿಯಲ್ಲಿ ಕಾರ್ಯಕ್ರಮ ನಡೆಸುವಂತೆ ಹೇಳಿದ್ದೆವು. ಆಟಗಾರರನ್ನು ಕ್ರೀಡಾಂಗಣಕ್ಕೆ ಕರೆತಂದು ಅಲ್ಲಿಯೇ ಕಾರ್ಯಕ್ರಮ ಮುಗಿಸುವಂತೆ ಸಲಹೆ ನೀಡಿದ್ದೆವು ಎಂದು ಪೊಲೀಸ್ ಅಧಿಕಾರಿ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
ದಣಿದಿದ್ದ ಪೊಲೀಸರು:
ಮಂಗಳವಾರ ರಾತ್ರಿಯಿಂದಲೇ ಬೆಂಗಳೂರಿನಲ್ಲಿ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿತ್ತು. ಪ್ರಮುಖ ಪ್ರದೇಶಗಳಲ್ಲಿ ಬೆಳಗಿನ ಜಾವ 3.30ರವರೆಗೆ ಮತ್ತು ಹೊರವಲಯದಲ್ಲಿ ಬೆಳಗಿನ ಜಾವ 4.30ರವರೆಗೆ ವಿಜಯೋತ್ಸವ ಆಚರಣೆಗಳು ನಡೆದಿದ್ದವು. ಬೆಳಗಿನ ಜಾವ 5.30 ರವರೆಗೆ, ಪೊಲೀಸ್ ಆಯುಕ್ತರಿಂದ ಹಿಡಿದು ಕಾನ್ಸ್ಟೇಬಲ್‌ಗಳವರೆಗೆ ನಮ್ಮ ಎಲ್ಲಾ ಸಿಬ್ಬಂದಿ ಬೀದಿಗಳಲ್ಲಿದ್ದರು ಮತ್ತು ಸಂಪೂರ್ಣವಾಗಿ ದಣಿದಿದ್ದರು. ಇದು ಸಂಪೂರ್ಣ ಹುಚ್ಚುತನ. ಈ ರೀತಿಯ ಉನ್ಮಾದವನ್ನು ನಾವು ಎಂದಿಗೂ ನೋಡಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯೋತ್ಸವಕ್ಕೆ ಸುಮಾರು 30,000 ದಿಂದ 40,000 ಜನರು ಆಗಮಿಸುವ ನಿರೀಕ್ಷೆ ನಗರ ಪೊಲೀಸರಿಗಿತ್ತು ಎಂದು ಮೂಲಗಳು ತಿಳಿಸಿವೆ. ಆದರೆ, ಅಂದಾಜು ಎರಡು ಲಕ್ಷಕ್ಕೂ ಹೆಚ್ಚು ಜನ ಬಂದಿದ್ದರು. ಸ್ಟೇಡಿಯಂ ಒಳಗೆ ನುಗ್ಗಲು ಯತ್ನಿಸಿದ್ದರು. ಇದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿ 11 ಜನ ಸಾವನ್ನಪ್ಪಿದರು ಮತ್ತು ಹಲವರು ಗಾಯಗೊಂಡರು.
ಕ್ರೀಡಾಂಗಣದ 35,000 ಆಸನ ಸಾಮರ್ಥ್ಯಕ್ಕೆ ಅನುಗುಣವಾಗಿ ಸುಮಾರು 3,000 ಪೊಲೀಸ್ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.