newsics.com
ಅಕ್ಷಯ ತೃತೀಯದಂದು ಆಸ್ಪತ್ರೆಯಲ್ಲಿ ವಿವಾಹ ಆದ ಘಟನೆ ಮಧ್ಯಪುದೇಶದ ರಾಜ್‌ಗಢ ಜಿಲ್ಲೆಯ ಬೀವರ್ ನಗರದಲ್ಲಿ ನಡೆಯಿತು. ಈ ವಿವಾಹವನ್ನು ನೋಡಿದ ಪ್ರತಿಯೊಬ್ಬರಿಗೂ ‘ವಿವಾಹ್’ ಸಿನಿಮಾ ನೆನಪಾಯ್ತು.
ಹೌದು, ಮದುವೆಗೆ ಸ್ವಲ್ಪ ಸಮಯದ ಮೊದಲು ವಧುವಿನ ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ ಆಸ್ಪತ್ರೆಯನ್ನೇ ವಿವಾಹ ಸ್ಥಳವನ್ನಾಗಿ ಪರಿವರ್ತಿಸಿದರು. ರಾಜ್‌ಗಢದ ಬೀವರ್‌ನ ಪರಮ್ ಸಿಟಿ ಕಾಲೋನಿಯ ನಿವಾಸಿ ಜಗದೀಶ್ ಸಿಂಗ್ ಸಿಕಾರ್ವಾರ್ ಅವರ ಸೋದರಳಿಯ ಆದಿತ್ಯ ಸಿಂಗ್ ಅವರ ವಿವಾಹವಾಗಿತ್ತು. ಆದಿತ್ಯನ ಮದುವೆ ಕುಂಭರಾಜ್ ನಿವಾಸಿ ನಂದಿನಿ ಜೊತೆ ನಿಶ್ಚಯವಾಗಿತ್ತು. ಮದುವೆ ದಿನಾಂಕವನ್ನು ಮೇ 1 ಅಕ್ಷಯ ತೃತೀಯ ದಿನದಂದು ನಿಗದಿಪಡಿಸಲಾಯಿತು. ಈ ಮದುವೆ ಕುಂಭರಾಜ್ ಬಳಿಯ ಪುರುಷೋತ್ತಮಪುರ ಗ್ರಾಮದಲ್ಲಿ ನಡೆಯಬೇಕಿತ್ತು. ಆದರೆ ಮದುವೆಗೆ 5 ದಿನಗಳ ಮೊದಲು ಏಪ್ರಿಲ್ 24 ರಂದು ವಧು ನಂದಿನಿಯ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿತು. ತರಾತುರಿಯಲ್ಲಿ ವಧುವನ್ನು ಬೀವಾರ್‌ನಲ್ಲಿರುವ ಪಂಜಾಬಿ ನರ್ಸಿಂಗ್ ಹೋಂಗೆ ಸೇರಿಸಲಾಯಿತು. ಚಿಕಿತ್ಸೆಯ ನಂತರ, ವೈದ್ಯರು ವಧುವಿಗೆ ವಿಶ್ರಾಂತಿ ಪಡೆಯಲು ಹೇಳಿದ್ದರು.
ಮನೆಯವರು ಆಸ್ಪತ್ರೆಯಲ್ಲಿಯೇ ಮದುವೆ ಮಾಡಿದ್ದಾರೆ. ವರನ ಕಡೆಯವರು ಕೂಡ ಆಸ್ಪತ್ರೆಯಲ್ಲಿ ಮದುವೆಗೆ ಸಿದ್ಧರಾದರು. ಇದಾದ ನಂತರ ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಮದುವೆ ನಡೆಯಿತು.
ಆಸ್ಪತ್ರೆಯಲ್ಲಿಯೇ ಶಾಸ್ತ್ರೋಸ್ತ್ರವಾಗಿ ಮದುವೆ ನಡೆಯಿತು. ಆಸ್ಪತ್ರೆಯಲ್ಲಿ ಮಂಟಪವನ್ನು ಅಲಂಕರಿಸಿ ಮದುವೆ ಸಮಾರಂಭವನ್ನು ಸರಳವಾಗಿ ನಡೆಸಲಾಯಿತು. ವಧು-ವರರ ಕಡೆಯವರಲ್ಲದೆ, ಆಸ್ಪತ್ರೆ ಸಿಬ್ಬಂದಿ ಕೂಡ ನವದಂಪತಿಗಳಿಗೆ ಹೂವುಗಳ ಮಳೆ ಸುರಿಸಿ ಆಶೀರ್ವದಿಸಿದರು. ವರನು ವಧುವನ್ನು ತನ್ನ ಮಡಿಲಲ್ಲಿ ಎತ್ತಿಕೊಂಡು ಏಳು ಸುತ್ತುಗಳನ್ನು ಹಾಕಿದಾಗ ಅತ್ಯಂತ ವಿಶೇಷವಾದ ಕ್ಷಣ ಕಂಡುಬಂತು.