newsics.com
ನವದೆಹಲಿ: ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ಗುಂಡಿನ ದಾಳಿಗೆ ಸಿಲುಕಿ 26 ಮಂದಿ ಅಮಾಯಕರು ಜೀವ ಕಳೆದುಕೊಂಡಿರುವ ಬೆನ್ನಲೇ ಪಾಕ್ ವಿರುದ್ಧ ಪ್ರತಿಕಾರಕ್ಕೆ ಭಾರತ ಮುಂದಾಗಿದೆ.
ಉಗ್ರರ ದಾಳಿಯ ಬೆನ್ನಲ್ಲೇ ಬುಧವಾರ ಸರ್ವಪಕ್ಷ ಸಮಿತಿ ಸಭೆ ನಡೆಸಿದ ಕೇಂದ್ರ, ಪಾಕ್ ವಿರುದ್ಧ ಐದು ಕಠಿಣ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು ಇದರಲ್ಲಿ 1960ರ ಸಿಂಧೂ ನದಿ ಒಪ್ಪಂದಕ್ಕೆ ತಡೆ, ಪಾಕಿಸ್ಥಾನಕ್ಕೆ ನೀಡುತ್ತಿದ್ದ ವೀಸಾ ರದ್ದು, ಅಟ್ಟಾರಿ-ವಾಘಾ ಗಡಿ ರಸ್ತೆ ಬಂದ್, ಭಾರತದ ರಾಯಭಾರಿ ಗಳು ವಾಪಸ್, ಭಾರತದಲ್ಲಿರುವ ಪಾಕಿಗಳಿಗೆ ಹಿಂದಿರುಗಲು 48 ತಾಸು ಗಡುವು ನೀಡಲಾಯಿತು.
ಇದೀಗ ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೆ ಖಡಕ್ ಸೂಚನೆಯೊಂದನ್ನು ರವಾನೆ ಮಾಡಿದ್ದು ಅದರಂತೆ ತಮ್ಮ ತಮ್ಮ ರಾಜ್ಯದಲ್ಲಿರುವ ಪಾಕಿಸ್ತಾನಿಗಳನ್ನು ಗುರುತಿಸಿ ಆದಷ್ಟು ಬೇಗ ಅವರನ್ನು ಗಡಿಪಾರು ಮಾಡುವಂತೆ ಸೂಚನೆ ನೀಡಿದ್ದಾರೆ. ಈಗಾಗಲೇ ಭಾರತಕ್ಕೆ ಭೇಟಿ ನೀಡುವ ಪಾಕ್ ಪ್ರಜೆಗಳಿಗೆ ನೀಡುವ ವೀಸಾವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಅಲ್ಲದೆ ಪ್ರಸ್ತುತ ನೀಡಿರುವ ವೀಸಾಗಳನ್ನು ಕೂಡ ರದ್ದು ಮಾಡಲಾಗುವುದು ಜೊತೆಗೆ ಭಾರತದಲ್ಲಿರುವ ಪಾಕ್ ಪ್ರಜೆಗಳು 48 ಗಂಟೆಗಳಲ್ಲಿ ಭಾರತವನ್ನು ತೊರೆಯಬೇಕು ಎಂದು ಸೂಚನೆ ನೀಡಲಾಗಿದೆ.
ಭಾರತ ಸದ್ಯ ಪಾಕಿಸ್ತಾನದ ಪ್ರಜೆಗಳಿಗೆ ನೀಡಿರುವ ವೀಸಾಗಳ ಅವಧಿಯು ಏಪ್ರಿಲ್ 27ರಿಂದ ಜಾರಿಗೆ ಬರುವಂತೆ ಮುಕ್ತಾಯವಾಗಲಿದೆ. ವೈದ್ಯಕೀಯ ವೀಸಾ ಏಪ್ರಿಲ್ 29ರವರೆಗೆ ಮಾತ್ರ ಊರ್ಜಿತವಾಗಿರಲಿದೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ಪ್ರಕಟಿಸಿದೆ.
ವೀಸಾದ ಅವಧಿ ಮುಗಿಯುವುದರೊಳಗೆ ಸದ್ಯ ಭಾರತದಲ್ಲಿ ನೆಲೆಸಿರುವ ಎಲ್ಲ ಪಾಕಿಸ್ತಾನಿಯರು ದೇಶವನ್ನು ತೊರೆಯಬೇಕು ಎಂದು ಭಾರತ ತಾಕೀತು ಮಾಡಿದೆ. ಇದೇ ವೇಳೆ ಭಾರತೀಯರು ನೆರೆಯ ಪಾಕಿಸ್ತಾನಕ್ಕೆ ಹೋಗುವುದನ್ನು ಕೈಬಿಡಬೇಕು. ಅಲ್ಲದೆ, ಈಗಾಗಲೇ ಪಾಕಿಸ್ತಾನಕ್ಕೆ ಹೋಗಿರುವವರು ಆದಷ್ಟು ಬೇಗ ದೇಶಕ್ಕೆ ಮರಳಬೇಕು ಎಂದು ಹೇಳಿದೆ.
ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ವೈಯಕ್ತಿಕವಾಗಿ ಕರೆ ಮಾಡಿರುವ ಅಮಿತ್ ಶಾ, ಪಾಕಿಸ್ತಾನದ ಯಾವುದೇ ಪ್ರಜೆ ಗಡುವು ಮೀರಿ ಭಾರತದಲ್ಲಿ ಇರದಂತೆ ನೋಡಿಕೊಳ್ಳಬೇಕು. ಜತೆಗೆ ತಮ್ಮ ತಮ್ಮ ಪ್ರದೇಶಗಳಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿ ಅವರನ್ನು ಗಡೀಪಾರು ಮಾಡುವಂತೆಯೂ ಮುಖ್ಯಮಂತ್ರಿಗಳಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಕೃತ್ಯಕ್ಕೆ ಪಾಕಿಸ್ತಾನದ ನೇರ ಸಹಕಾರವಿದೆ ಎಂದು ಪ್ರತಿಪಾದಿಸಿರುವ ಭಾರತ, ಪ್ರತಿಕ್ರಿಯೆಯಾಗಿ ಬುಧವಾರ ಐದು ಕಠಿಣ ಕ್ರಮಗಳನ್ನು ಪ್ರಕಟಿಸಿತ್ತು. ವಾಘಾ ಗಡಿ ಬಂದ್, ಸಿಂಧೂ ನದಿ ನೀರಿನ ಹಂಚಿಕೆ ಒಪ್ಪಂದ ಅಮಾನತು ಇದರಲ್ಲಿ ಸೇರಿವೆ.