newsics.com
ನವದೆಹಲಿ:ಜಮ್ಮುಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ನಗರದ ಬಳಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ಏಕಾಏಕಿ ಗುಂಡಿನ ದಾಳಿ ನಡೆಸಿ 28 ಕ್ಕೊ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.ಈ ದಾಳಿಯಿಂದ ಭಾರತದಲ್ಲಿ ಕೋಪದ ವಾತಾವರಣವಿದೆ. ಈ ಘಟನೆಯಿಂದ ಪಾಕಿಸ್ತಾನದಲ್ಲಿ ಭಯ ಹರಡಿದೆ.
ಈ ಘಟನೆ ಕುರಿತು ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭದ್ರತೆ ಕುರಿತ ಸಂಪುಟ ಸಮಿತಿ ಸಭೆ ನಡೆಸಿದೆ.
ಗೃಹಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಜೈಶಂಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಪ್ರಮುಖರ ಜೊತೆ ಚರ್ಚಿಸಿ ಪ್ರಧಾನಿ ಮೋದಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಈ ಬಗ್ಗೆ ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಂ ಮಿಶ್ರಿ ಸುದ್ದಿಗೋಷ್ಠಿ ನಡೆಸಿದ್ದಾರೆ.
ಸಿಂಧೂ ನದಿ ನೀರು ಒಪ್ಪಂದ ರದ್ದು ಮಾಡಲು ಭಾರತ ನಿರ್ಧರಿಸಿದೆ. 1960 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಸಹಿ ಹಾಕಲಾದ ಸಿಂಧೂ ಜಲ ಒಪ್ಪಂದವು, ಸಿಂಧೂ ನದಿ ಮತ್ತು ಅದರ ಉಪನದಿಗಳ ನೀರನ್ನು ಎರಡೂ ದೇಶಗಳ ನಡುವೆ ಹಂಚುವ ನೀರು ಹಂಚಿಕೆ ಒಪ್ಪಂದವಾಗಿತ್ತು. ಆದರೆ ಇದೀಗ ಆ ನದಿ ನೀರನ್ನೇ ಬಂದ್ ಮಾಡಿ, ಈ ಮೂಲಕ ಪಾಕಿಸ್ತಾನಕ್ಕೆ ಭಾರತ ಬಿಸಿ ಮುಟ್ಟಿಸಲು ಮುಂದಾಗಿದೆ.
ಪಾಕಿಸ್ತಾನ ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಲ್ಲಿಸುವವರೆಗೆ ಸಿಂಧೂ ನದಿ ನೀರು ಒಪ್ಪಂದವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.