newsics.com
ಕಾರವಾರ: ಪ್ರೀತಿಸಿ ಮದುವೆಯಾದ ಮಗಳು ಮತ್ತು ಅಳಿಯನಿಗೆ ಚಾಕುವಿನಿಂದ ಇರಿದು, ನಂತರ ವ್ಯಕ್ತಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ರಂಗಾಪುರದಲ್ಲಿ ನಡೆದಿದೆ.
ಬದನಗೋಡಿನ ಯುವತಿ ಪೋಷಕರಿಗೆ ತಿಳಿಸದೇ ರಂಗಾಪುರದ ಯುವಕನೊಂದಿಗೆ ಕಳೆದ ಮೂರು ತಿಂಗಳ ಹಿಂದೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದಳು. ಅನ್ಯ ಜಾತಿಯ ಯುವಕ ಎಂದು ಶಂಕರ ಕಮ್ಮಾರ ವಿರೋಧ ವ್ಯಕ್ತಪಡಿಸಿದ್ದ.
ನಡೆದಿದ್ದೇನು?:
ಯುವಕನ ಮನೆಗೆ ಮಗಳನ್ನು ನೋಡುವ ನೆಪದಲ್ಲಿ ಬಂದು, ನಿಮ್ಮ ಮದುವೆಗೆ ಸಾಕ್ಷಿ ಹಾಕಿದವರ ಹೆಸರು ಹೇಳುವಂತೆ ಮಗಳ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಮಗಳು ಹೆಸರು ಹೇಳದೇ ಇದ್ದುದಕ್ಕೆ ಹತ್ಯೆಗೆ ಯತ್ನಿಸಿದ್ದಾನೆ. ತಡೆಯಲು ಬಂದ ಅಳಿಯನಿಗೂ ಎದೆ ಹಾಗೂ ಕೈಗೆ ಚಾಕುವಿನಿಂದ ಇರಿದಿದ್ದಾನೆ.ಹಲ್ಲೆಗೆ ಒಳಗಾದ ಇಬ್ಬರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಲ್ಲಿಂದ ತಪ್ಪಿಸಿಕೊಂಡು ತನ್ನೂರಿಗೆ ಬಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್ ಮೂವರೂ ಬದುಕುಳಿದಿದ್ದು, ಇರಿತಕ್ಕೊಳಗಾದ ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದಾರೆ.