newsics.com
ಅಮೆರಿಕ: ಹೊಸ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಲಸಿಗರ ವಿಚಾರದಲ್ಲಿ ಕಠಿಣ ಧೋರಣೆ ತಾಳಿರುವುದರಿಂದ ಅಮೆರಿಕದಲ್ಲಿರುವ ಭಾರತೀಯರಿಗೆ ಆಘಾತವಾಗಿದೆ.
127 ವರ್ಷದ ಹಳೆಯ ಸಂವಿಧಾನವನ್ನು ತಿದ್ದುಪಡಿ ಮಾಡುವ ಆದೇಶಕ್ಕೆ ಸಹಿ ಹಾಕಿರುವುದು ಭಾರತೀಯರ ಆತಂಕ ಹೆಚ್ಚಿಸಿದೆ.
ಟ್ರಂಪ್ ಅವರ ಹೊಸ ಕಾನೂನಿಂದ ಪಾರಾಗಿ ಅಮೆರಿಕ ಪೌರತ್ವ ಪಡೆಯಲು ಅವಧಿಗೆ ಮುನ್ನವೇ ಹೆರಿಗೆ ಮಾಡಿಸಿಕೊಳ್ಳಲು ಭಾರತೀಯರು ಮುಂದಾಗಿದ್ದಾರೆ.
ಹುಟ್ಟಿನಿಂದ ಸಿಗುವ ಪೌರತ್ವ ಹಕ್ಕು ನೀತಿಯನ್ನು ಅಂತ್ಯಗೊಳಿಸುವ ಕಾನೂನಿಗೆ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದು, ಫೆಬ್ರವರಿ 20 ರಿಂದ ಜಾರಿಗೆ ಬರಲಿದೆ. ಫೆಬ್ರವರಿ 20ರ ಬಳಿಕ ಜನಿಸುವ ವಲಸಿಗರ ಮಕ್ಕಳಿಗೆ ಅಮೆರಿಕದ ಪೌರತ್ವ ಪಡೆಯುವುದು ಕಠಿಣವಾಗಲಿದ್ದು ಇದರಿಂದಾಗಿ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಅವಧಿಗೆ ಮುನ್ನವೇ ಹೆರಿಗೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ.
ಹೊಸ ಕಾನೂನು ಜಾರಿಗೆ ಬಂದರೆ ಫೆಬ್ರವರಿ ಹುಟ್ಟುವ ಮಕ್ಕಳಿಗೆ 21 ವರ್ಷದವರೆಗೆ ಅಮೆರಿಕದಲ್ಲಿ ವಾಸಿಸಲು ಅವಕಾಶವಿದ್ದು ಬಳಿಕ ಅವರ ದೇಶಕ್ಕೆ ವಾಪಸ್ ಆಗಬೇಕಾಗುತ್ತದೆ. ಇದರಿಂದ ಪಾರಾಗಲು ಭಾರತೀಯ ಫೋಷಕರು ಅವಧಿಗೆ ಮುನ್ನವೇ ಹೆರಿಗೆಗೆ ಮುಂದಾಗಿದ್ದಾರೆ.
8 ಮತ್ತು 9 ತಿಂಗಳು ತುಂಬಿರುವ ಗರ್ಭಿಣಿಯರು ಸಿ ಸೆಕ್ಷನ್ ಹೆರಿಗೆಗೆ ಮುಂದಾಗಿದ್ದು ಆಸ್ಪತ್ರೆಯಲ್ಲಿ ಅವಧಿಗೆ ಮುನ್ನ ಹೆರಿಗೆಗಾಗಿ ಬರುವ ಗರ್ಭಿಣಿಯರ ಸಂಖ್ಯೆ ಹೆಚ್ಚಾಗಿದೆ ಎಂದು ವರದಿಗಳು ತಿಳಿಸಿವೆ.
ಏಳು ತಿಂಗಳ ಮಹಿಳೆಯೊಬ್ಬರು ಪತಿಯ ಜತೆ ಅವಧಿಪೂರ್ವ ಹೆರಿಗೆಗೆ ನೋಂದಾಯಿಸಲು ಬಂದರು, ಅವರಿಗೆ ಮಾರ್ಚ್‌ವರೆಗೆ ಹೆರಿಗೆ ಮಾಡಲು ಅವಕಾಶವಿಲ್ಲ. ಇಂತಹ ಪ್ರಕರಣ ಹೆಚ್ಚುತ್ತಿವೆ ಎಂದು ನ್ಯೂಜೆರ್ಸಿಯ ಡಾ. ಎಸ್‌ಡಿ ರೋಮಾ ಹೇಳಿದ್ದಾರೆಂದು ವರದಿಯಾಗಿದೆ.
ಅಮೆರಿಕದಲ್ಲಿ ಜನಿಸುವ ಮಕ್ಕಳನ್ನು ಈವರೆಗೆ ಅಮೆರಿಕದ ನಾಗರಿಕ ಎಂದು ಪರಿಗಣಿಸಲಾಗುತ್ತಿತ್ತು. ಪೋಷಕರಿಗೆ ಪೌರತ್ವ ಇಲ್ಲದೇ ಇದ್ದರೂ ಅಲ್ಲೇ ಜನಿಸುವ ಮಗು ಪೌರತ್ವ ಪಡೆಯುತ್ತಿತ್ತು. ಈ ಕಾನೂನು ರದ್ದು ಮಾಡಲು ಟ್ರಂಪ್ ಮುಂದಾಗಿರುವುದು ಅವಧಿಪೂರ್ವ ಹೆರಿಗೆಗೆ ಕಾರಣವಾಗಿದೆ.
ಆದರೆ ಹುಟ್ಟಿನಿಂದ ನಾಗರಿಕತೆ ಪಡೆಯುವ ಹಕ್ಕು ಅಮೆರಿಕದ ಸಂವಿಧಾನದಲ್ಲಿಯೇ ಇರುವ ಕಾರಣ ಆದೇಶ ಜಾರಿಯಾಗುವುದು ಅನುಮಾನ ಎನ್ನಲಾಗಿದೆ. ಟ್ರಂಪ್ ಆದೇಶಕ್ಕೆ ತಡೆ ನೀಡಬೇಕು ಎಂದು 22 ರಾಜ್ಯಗಳ ಅಟಾರ್ನಿ ಜನರಲ್‌ಗಳು ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ತಾತ್ಕಾಲಿಕವಾಗಿ ಅಮೆರಿಕದಲ್ಲಿ ನೆಲೆಸಲು ಅನುಮತಿ ನೀಡುವ ತಾತ್ಕಾಲಿಕ ಹೆಚ್1ಬಿ, ಎಲ್1 ವೀಸಾ, ಗ್ರೀನ್ ಕಾರ್ಡ್, ತಾತ್ಕಾಲಿಕ ವೀಸಾ, ವಿದ್ಯಾರ್ಥಿ ವೀಸಾ, ಪ್ರವಾಸಿ ವೀಸಾ, ದಾಖಲೆ ಹೊಂದಿಲ್ಲದೇ ವಾಸಿಸುತ್ತಿರುವ ಭಾರತೀಯರ ಮೇಲೆ ಹೊಸ ಕಾನೂನು ಪರಿಣಾಮ ಬೀರಲಿದೆ.