newsics.com
ಬೆಂಗಳೂರು : ಫೆಂಗಲ್ ಚಂಡಮಾರುತ ತಮಿಳುನಾಡು ಹಾಗೂ ಪುದುಚೇರಿ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿದ್ದು ದಾಖಲೆಯ ಮಳೆ ಸುರಿಸುತ್ತಿದೆ.
ತಮಿಳುನಾಡಿನ ಕರಾವಳಿ ಜಿಲ್ಲೆಗಳಲ್ಲಿ ದಾಖಲೆಯ ಮಳೆಯ ಪ್ರಮಾಣ 450 ಮಿ.ಮೀ ದಾಟಿದೆ. ಪಾಂಡಿಚೇರಿ, ಚೆನ್ನೈ, ಚೆಂಗಲ್ಪಟ್ಟು, ವಿಲ್ಲುಪುರಂ, ತಿರುವಣ್ಣಾಮಲೈ, ತಿರುವಳ್ಳುರ್, ಕಾಂಚೀಪುರಂ, ಕೂಡ್ಲೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಕರ್ನಾಟಕದಲ್ಲೂ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆ ಮುನ್ಸೂಚನೆ ಇದೆ. ಹಾಗಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ನಿರಂತರ ಜಡಿ ಮಳೆ ಹಾಗೂ ವಿಪರೀತ ಚಳಿ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ಒಂದು ದಿನ ರಜೆ ಘೋಷಣೆ ಮಾಡಲಾಗಿದೆ. ನಾಳಿನ ರಜೆಯನ್ನು ಮತ್ತೊಂದು ರಜಾ ದಿನದಲ್ಲಿ ತರಗತಿ ನಡೆಸಿ ಸರಿದೂಗಿಸಲು ಡಿಸಿ ಅಕ್ರಂ ಪಾಷಾ ಆದೇಶ ನೀಡಿದ್ದಾರೆ.
ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣ ಇದ್ದು ನಿನ್ನೆ ರಾತ್ರಿಯಿಂದಲೇ ಜಿಟಿಜಿಟಿ ಮಳೆ ಸುರಿಯುತ್ತಿದೆ. ಇನ್ನು ಭಾರಿ ಮಂಜಿನ ಕಾರಣ ಬೆಂಗಳೂರಿನಿಂದ ಚೆನ್ನೈಗೆ ಹೊರಡಬೇಕಿದ್ದ ದೇಶೀಯ ಹಾಗೂ ಅಂತರರಾಷ್ಟ್ರೀಯ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಇಂದು ಬೆಳಗ್ಗೆಯಿಂದ ಕೆಲ ವಿಮಾನಗಳ ಹಾರಾಟ ಆರಂಭವಾಗಿದೆ.
ಫೆಂಗಲ್ ಅಬ್ಬರಕ್ಕೆ ಜನಜೀವನ ಅಕ್ಷರಶಃ ತತ್ತರಿಸಿವೆ. ರಸ್ತೆಗಳು ಜಲಾವೃತವಾಗಿವೆ. ರೈಲ್ವೇ ಹಳಿಗಳು ಮುಳುಗಿವೆ. ವಿಮಾನ ಸಂಚಾರ ವ್ಯತ್ಯಯವಾಗಿದೆ. ತಗ್ಗುಪ್ರದೇಶದ ಮನೆಗಳು ಮುಳುಗಿದ್ದು ಜನ ಪರದಾಡುವಂತಾಗಿದೆ.