newsics.com
ಬೆಂಗಳೂರು: ನಟ, ನಿರ್ದೇಶಕ, ಸ್ಯಾಂಡಲ್ ವುಡ್ ನ ವಿನೂತನ ಡೈರೆಕ್ಟರ್ ಎಂದೇ ಖ್ಯಾತಿ ಗಳಿಸಿದ್ದ ಗುರುಪ್ರಸಾದ್ ಸಾವು ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಸಿನಿಮಾಗಳಲ್ಲಿ ಆಸ್ಮಸ್ಥೈರ್ಯದ ಪ್ರತೀಕದಂತೆ ಕಾಣುತ್ತಿದ್ದ ಅವರು ಆತ್ಮಹತ್ಯೆಗೆ ಶರಣಾಗಲು ಕಾರಣ ಏನು?
ಕೋರ್ಟ್ ಕೇಸ್ ಗುರುಪ್ರಸಾದ್ ಅವರನ್ನು ಹೈರಾಣಾಗಿಸಿತ್ತು ಎನ್ನಲಾಗಿದೆ. ಶ್ರೀನಿವಾಸ್ ಗೌಡ ಎಂಬುವರ ಜತೆ ಹಣದ ವ್ಯವಹಾರ ಇತ್ತು, ಗುರು ಪ್ರಸಾದ್ ಅವರಿಗೆ 25 ಲಕ್ಷ ಹಣ ಕೊಟ್ಟಿದ್ದರು ಶ್ರೀನಿವಾಸ್ ಗೌಡ. ಶ್ರೀನಿವಾಸ್ ಗೌಡ ಗುರು ಪ್ರಸಾದ್ ಅವರ ಅಭಿಮಾನಿ ಆಗಿದ್ದರಂತೆ. ಅವರ ಬರವಣಿಗೆ ಮೆಚ್ಚಿ ಅವರ ಜತೆ ಇದ್ರು ಎನ್ನಲಾಗಿದೆ. ಹಣ ವಾಪಸ್ ಕೊಡಲಾಗದೇ ಗುರುಪ್ರಸಾದ್ ಸಮಸ್ಯೆ ಮಾಡಿಕೊಂಡಿದ್ದರಂತೆ.
ಶ್ರೀನಿವಾಸ್ ಗೌಡ ಅವರ ಜತೆಗಿನ ಈ ಹಣದ ವ್ಯವಹಾರ ಕೋರ್ಟ್ ಮೆಟ್ಟಿಲೇರಿತ್ತು. ಕಳೆದ 24 ನೇ ತಾರೀಖು ಕೋರ್ಟ್ ವಿಚಾರಣೆ ಇತ್ತು. ಮೆಡಿಕಲ್ ರಿಪೋರ್ಟ್ ಕೊಟ್ಟು ಪ್ರಕರಣ ಮುಂದಕ್ಕೆ ಹಾಕಿಸಿಕೊಂಡಿದ್ರು ಗುರುಪ್ರಸಾದ್. ನಿನ್ನೆ ಗುರುಪ್ರಸಾದ್ ಹುಟ್ಟುಹಬ್ಬ ಇತ್ತು. ವಿಶ್ ಮಾಡಲು ಯಾರೇ ಫೋನ್ ಕಾಲ್ ಮಾಡಿದರೂ ಗುರುಪ್ರಸಾದ್ ಪಿಕ್ ಮಾಡಿಲ್ಲ, ಆಗ ಹಲವರಿಗೆ ಶಾಕ್ ಆಗಿದ್ದು, ಬಳಿಕ ವಿಷಯ ಬೆಳಕಿಗೆ ಬಂದಿದೆ.
ಕನ್ನಡದ ನಿರ್ದೇಶಕ ಗುರು ಪ್ರಸಾದ್ ಅವರು ‘ಇನ್ಸ್ ಟ್ಯೂಟ್ ಆಪ್ ಸ್ಕ್ರಿಪ್ಟ್ ರೈಟಿಂಗ್ ಹಾಗೂ ಡೈರೆಕ್ಷನ್ ಅನ್ನೋ ಸ್ಕೂಲ್ ನಡೆಸುತ್ತಿದ್ದರು. ಜಿಯೋ ಸ್ವಾದ್ ಅನ್ನೋ ಶಾಲೆ ಸಹ ನಡೆಸುತ್ತಿದ್ರು ಎನ್ನಲಾಗಿದೆ. ರಂಗನಾಯಕ ಸಿನಿಮಾ ನಿರ್ದೇಶನ ಕೂಡ ಮಾಡ್ತಾ ಇದ್ರು. ಆದರೆ, ಇದೀಗ ಸಾವಿಗೆ ಶರಣಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಎನ್ನಲಾಗುತ್ತಿದೆ. ಮೃತರಾಗಿ ಹತ್ತು ದಿನಗಳು ಆಗಿದ್ದಿರಬಹುದು ಎನ್ನಲಾಗುತ್ತಿದ್ದು, ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ.
2006 ರಲ್ಲಿ ‘ಮಠ’ ಸಿನಿಮಾ ಮೂಲಕ ನಿರ್ದೇಶಕ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಮಠ, ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್ , ಎರಡನೇ ಸಲ ಸಿನಿಮಾಗಳನ್ನು ನಿರ್ದೇಶಿಸಿದ್ರು. ‘ರಂಗನಾಯಕ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ರಂಗನಾಯಕ ಚಿತ್ರದ ಸುದ್ದಿಗೋಷ್ಠಿ ವೇಳೆಯೂ ಸಾಕಷ್ಟು ಸುದ್ದಿಯಾಗಿದ್ದರು. ಕನ್ನಡದ ಬಗ್ಗೆ, ಕನ್ನಡ ಸಿನಿಮಾ ಬಗ್ಗೆ ಬಹಳಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದರು.
ಬಿಗ್ ಬಾಸ್ ಸೇರಿದಂತೆ, ಕಿರುತೆರೆಯಲ್ಲೂ ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ಭಾಗಿ ಆಗಿದ್ರು. ಬಿಗ್ ಬಾಸ್‌ನಲ್ಲೂ ಮಿಂಚಿದ್ದ ಗುರುಪ್ರಸಾದ್, ವಿವಾದಗಳಿಂದಲೂ ಆಗಾಗ ಹೆಸರುವಾಸಿಯಾಗಿದ್ದರು. ಇದೀಗ ಆತ್ಮಹತ್ಯೆ ಮೂಲಕ ಗುರುಪ್ರಸಾದ್ ಸಿನಿಪ್ರಿಯರ ಕಣ್ಣಲ್ಲಿ ನೀರು ತರಿಸಿದ್ದಾರೆ. ಯಾಕೆ ಆತ್ಮಹತ್ಯೆ ಮಾಡಿಕೊಂಡರು? ಅಂತಹ ಕಾರಣವೇನಿತ್ತು ಎಂಬುದು ಇನ್ನಷ್ಟೇ ಬಹಿರಂಗ ಆಗಬೇಕಿದೆ.
ಗುರುಪ್ರಸಾದ್ ಸಾವಿನ ಸಂಗತಿ ತಿಳಿದು ಕನ್ನಡ ಸಿನಿಪ್ರಿಯರು ದಿಗ್ಭ್ರಾಂತರಾಗಿದ್ದಾರೆ.