newsics.com
ಬೆಂಗಳೂರು: ಬೀದಿನಾಯಿ ಹಾವಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಮಹತ್ವದ ಕ್ರಮಕ್ಕೆ BBMP ಮುಂದಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಪ್ರಾಯೋಗಿಕವಾಗಿ ಮೈಕ್ರೋ ಚಿಪ್ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಪಾಲಿಕೆಯ ಆರೋಗ್ಯ ಮತ್ತು ಪಶುಪಾಲನಾ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ವಿಕಾಸ್ ಕಿಶೋರ್, ಮೈಕ್ರೋ ಚಿಪ್ ತಂತ್ರಜ್ಞಾನದಿಂದ ನಾಯಿಯ ವಾಸಸ್ಥಳ, ಲಸಿಕೆ ನೀಡಿದ ದಿನಾಂಕ, ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿದ ದಿನಾಂಕ ಹಾಗೂ ಇನ್ನಿತರ ಅಂಶಗಳನ್ನು ಶಾಶ್ವತವಾಗಿ ಚಿಪ್‌ನಲ್ಲಿ ಶೇಖರಿಸಬಹುದಾಗಿದೆ ಎಂದರು.
ಮೈಕ್ರೋ ಚಿಪ್ ತಂತ್ರಜ್ಞಾನವನ್ನು ಈಗಾಗಲೇ ಹಲವಾರು ಸ್ಥಳೀಯ ಸಂಸ್ಥೆಗಳು ಬೀದಿ ನಾಯಿಗಳಿಗೆ ಅಳವಡಿಸಿಕೊಂಡಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಬಿಝ್ ಆರ್ಬಿಟ್ ಎಂಬ ಸಂಸ್ಥೆಯ ಸಹಯೋಗದೊಂದಿಗೆ ಪ್ರಾಯೋಗಿಕವಾಗಿ ಬೀದಿ ನಾಯಿಗಳಿಗೆ ಅಳವಡಿಕೆ ಮಾಡಲಾಗುತ್ತಿದೆ. ಮೈಕ್ರೋ ಚಿಪ್ ಒಂದು ಅಕ್ಕಿಕಾಳು ಗಾತ್ರದ ಸಾಧನವಾಗಿದ್ದು, ಪ್ರಾಣಿಗಳಲ್ಲಿ ಶಾಶ್ವತ ಗುರುತಿನ ವಿಧಾನವಾಗಿರುತ್ತದೆ ಎಂದು ಮಾಹಿತಿ ನೀಡಿದರು.