newsics.com
ಕೋಟ್ಯಂತರ ಮಂದಿಯ ಕನಸಿನ ಸೂರು ಬೆಂಗಳೂರು ಕೆಂಪೇಗೌಡರು ಕಟ್ಟಿದ್ದ ನಾಲ್ಕು ಗಡಿ ಗೋಪುರಗಳನ್ನು ದಾಟಿ ಬೆಳೆದು ಅದೆಷ್ಟೋ ವರ್ಷಗಳಾಯಿತು. ದಿನದಿಂದ ದಿನಕ್ಕೆ ಬೆಂಗಳೂರಿನ ವ್ಯಾಪ್ತಿ ದೊಡ್ಡದಾಗುತ್ತಲೇ ಹೋಗುತ್ತಿದೆ. ಇದಕ್ಕಾಗಿ ಸರ್ಕಾರ ಹೊಸದೊಂದು ಯೋಚನೆ ಮಾಡಿದ್ದು ‘ಗ್ರೇಟರ್ ಬೆಂಗಳೂರು ಅಥಾರಿಟಿ’ ಅಸ್ತಿತ್ವಕ್ಕೆ ತರಲು ತೀರ್ಮಾನಿಸಿದೆ.
ಬೃಹತ್ ಬೆಂಗಳೂರನ್ನು ವಿಭಜಿಸುವ ವರದಿಗೆ ರಾಜ್ಯ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ. ಬಿಬಿಎಂಪಿ ಸುಧಾರಣಾ ಸಮಿತಿ ಅಧ್ಯಕ್ಷ ಬಿ.ಎಸ್. ಪಾಟೀಲ್ ಸಮಿತಿ ನೀಡಿದ್ದ ವರದಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಬೆಂಗಳೂರನ್ನು 10 ಪಾಲಿಕೆಗಳಾಗಿ ವಿಭಜಿಸಿ, ಬಿಬಿಎಂಪಿಯನ್ನು ರದ್ದುಗೊಳಿಸಲು ಈ ಸಮಿತಿ ಶಿಫಾರಸ್ಸು ಮಾಡಿತ್ತು. ಇದೀಗ ಈ ಸಮಿತಿಯ ಸಲಹೆಯಂತೆ ಗ್ರೇಟರ್ ಬೆಂಗಳೂರು ಅಥಾರಿಟಿ ಮಾಡುವ ನಿರ್ಧಾರಕ್ಕೆ ಸಂಪುಟ ಅಸ್ತು ಎಂದಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇನ್ನು ಮುಂದೆ ಗ್ರೇಟರ್ ಬೆಂಗಳೂರು ಅಗಲಿದೆ. ದಿನದಿಂದ ದಿನಕ್ಕೆ ವಿಸ್ತರಣೆಯಾಗುತ್ತಿರುವ ಬೆಂಗಳೂರಿಗೆ ಹೊಸ ರೂಪ, ಹೊಸ ಆಡಳಿತ ನೀಡಲು ಸರ್ಕಾರ ತೀರ್ಮಾನಿಸಿದೆ. ಗ್ರೇಟರ್ ಬೆಂಗಳೂರು ಅಥಾರಿಟಿ ಸ್ಥಾಪನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ವಿಧಾನಸಭೆ, ಪರಿಷತ್ನಲ್ಲಿ ‘ದಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024 ’ ಮಂಡನೆಗೆ ಸರ್ಕಾರ ನಿರ್ಧರಿಸಿದೆ.
ರಾಮನಗರ, ಕನಕಪುರವನ್ನು ಬೆಂಗಳೂರಿಗೆ ಸೇರಿಸಲು ರೂಪುರೇಷೆ ಮಾಡಲಾಗಿದೆ. ಸದ್ಯ ಇರುವ ಬಿಬಿಎಂಪಿಯನ್ನು 5 ಭಾಗಗಳಾಗಿ ವಿಭಜಿಸಲು ಕ್ಯಾಬಿನೆಟ್ ಅನುಮೋದನೆ ಕೊಟ್ಟಿದೆ. ಹೊಸದಾಗಿ ವಾರ್ಡ್ಗಳನ್ನು ಸೇರಿಸಿಕೊಂಡು ವಿಸ್ತರಿಸಲು ಪ್ಲ್ಯಾನ್ ಮಾಡಲಾಗಿದೆ. ಈ ಮೂಲಕ ಬಿಬಿಎಂಪಿ ಬದಲು ‘ಗ್ರೇಟರ್ ಬೆಂಗಳೂರು ಅಥಾರಿಟಿ’ ಅಸ್ತಿತ್ವಕ್ಕೆ ತರಲಾಗುತ್ತದೆ. ಸುಮಾರು 1400 ಚದರ ಕಿಲೋಮೀಟರ್ನಷ್ಟು ವ್ಯಾಪ್ತಿ ‘ಜಿಬಿಎ’ ಅಡಿಯಲ್ಲಿ ಬರಲಿದೆ. 1 ರಿಂದ 10 ಕಾರ್ಪೊರೇಷನ್ಗಳು ವ್ಯಾಪ್ತಿಗೆ ಬರಲಿವೆ. ಈ ಕಾರ್ಪೊರೇಷನ್ಗಳು 950 ಚದರ ಕಿಲೋಮೀಟರ್ ವ್ಯಾಪ್ತಿ ಹೊಂದಲಿದೆ. ಸದ್ಯ ಇರುವ708 ಚದರ ಕಿಲೋ ಮೀಟರ್ಗಳ ಬಿಬಿಎಂಪಿ ರದ್ದಾಗಲಿದೆ.