newsics.com
ಬಿಹಾರ್ :ಸೇತುವೆಗಳು ಧರೆಗುರುಳುವ ಪ್ರಕರಣಗಳು ಜಾಸ್ತಿಯಾಗಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ, ಬಿಹಾರ ಸರ್ಕಾರವ 15 ಎಂಜಿನಿಯರ್‌ಗಳನ್ನು ಅಮಾನತು ಮಾಡಿದೆ.
ಜುಲೈ 3ರಂದು ಸಿವಾನ್ ಜಿಲ್ಲೆಯಲ್ಲಿ 2 ಸೇತುವೆ ಬಿದ್ದಿದ್ದವು. ಇನ್ನು, ಜುಲೈ 4ರಂದು ಸರಣ್ ಜಿಲ್ಲೆಯಲ್ಲಿ ಒಂದು ಸೇತುವೆ ಕುಸಿದಿತ್ತು. ಜೂನ್ 28ರಂದು ಮಧುಬನಿ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದಿತ್ತು. ಇದಕ್ಕೂ ಒಂದು ದಿನ ಮೊದಲೇ ಅಂದರೆ ಜೂನ್ 27ರಂದು ಕಿಶನ್‌ಗಂಜ್ ಜಿಲ್ಲೆಯಲ್ಲಿ ಸೇತುವೆಯೊಂದು ಕುಸಿದಿತ್ತು. ಜೂನ್ 23ರಂದು ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ಸಣ್ಣ ಸೇತುವೆ ಕುಸಿದು ಅಧಿಕಾರಿಗಳು ಜನರ ಆಕ್ರೋಶಕ್ಕೆ ಗುರಿಯಾಗಿದ್ದರು. ಜೂನ್ 22ರಂದು ಕೂಡ ಸಿವಾನ್ ಜಿಲ್ಲೆಯಲ್ಲಿ ಸೇತುವೆ ಕುಸಿದಿತ್ತು. ಜೂನ್ 19ರಂದೂ ಅರಾತಿಯಾ ಪ್ರದೇಶದಲ್ಲಿ ನಿರ್ಮಾಣ ಹಂತದ ಸೇತುವೆ ಧರೆಗುರುಳಿತ್ತು.
ಬಿಹಾರದಲ್ಲಿ ಸೇತುವೆಗಳ ನಿರ್ಮಾಣದ ವೇಳೆ ಕರ್ತವ್ಯ ಲೋಪ ಎಸಗಿದ ಕಾರಣ ಸೇತುವೆಗಳು ಕುಸಿದಿವೆ. ಇದೇ ಕಾರಣಕ್ಕಾಗಿ ರಾಜ್ಯ ಸರ್ಕಾರವು 15 ಎಂಜಿನಿಯರ್‌ಗಳನ್ನು ಅಮಾನತುಗೊಳಿಸಿದೆ. ಜಲ ಸಂಪನ್ಮೂಲ ಇಲಾಖೆಯ 11 ಹಾಗೂ ಗ್ರಾಮೀಣ ಅಭಿವೃದ್ಧಿ ಇಲಾಖೆಯ ನಾಲ್ವರು ಎಂಜಿನಿಯರ್‌ಗಳನ್ನು ಅಮಾನತುಗೊಳಿಸಲಾಗಿದೆ. ಇನ್ನು, ಸೇತುವೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಎಂಜಿನಿಯರ್‌ಗಳಿಂದ ವಿವರಣೆ ಕೇಳಲಾಗಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆ ತನಿಖೆಗೆ ಆದೇಶಿಸಲಾಗಿದ್ದು, ಇನ್ನಷ್ಟು ಅಧಿಕಾರಿಗಳನ್ನು ಮನೆಗೆ ಕಳುಹಿಸಲಾಗುತ್ತದೆ ಎಂದು ತಿಳಿದುಬಂದಿದೆ.