ಮಂಡ್ಯ: ಕಳೆದ ಬಾರಿ ಮಳೆ ಕೊರತೆಯಿಂದ ತುಂಬದ ಕೃಷ್ಣರಾಜ ಸಾಗರ ಜಲಾಶಯ ಈ ಬಾರಿ ಕೊಡಗಿನಲ್ಲಿ ಒಂದು ವಾರ ನಿರಂತರವಾಗಿ ಸುರಿದ ಭಾರೀ ಮಳೆಗೆ ಉತ್ತಮ ಒಳ ಹರಿವು ಕಂಡಿದೆ. ಈಗಾಗಲೇ 94 ಅಡಿ ದಾಟಿರುವ ಕೆಆರ್ ಎಸ್ ನೀರಿನ ಮಟ್ಟ ನಿಧಾನವಾಗಿ ಏರುತ್ತಲೇ ಇದೆ. ಇದಲ್ಲದೇ ಹಾಸನದ ಹೇಮಾವತಿ ಹಾಗೂ ಕೊಡಗಿನ ಹಾರಂಗಿ ಜಲಾಶಯಕ್ಕೂ ಚೆನ್ನಾಗಿದ್ದು, ಇದರಿಂದ ಈ ವಾರದಲ್ಲಿಯೇ ಕೆಆರ್‌ಎಸ್ ಜಲಾಶಯ ನೂರು ಅಡಿ ತಲುಪುವ ಲಕ್ಷಣಗಳು ಕಾಣುತ್ತಿವೆ.
ಕೃಷ್ಣರಾಜಸಾಗರ ಜಲಾಶಯಕ್ಕೆ ಭಾನುವಾರ ಬೆಳಿಗ್ಗೆ ಹೊತ್ತಿಗೆ 12867 ಕ್ಯುಸೆಕ್ ನೀರು ಹರಿದುಬರುತ್ತಿದೆ. ಕೊಡಗಿನಲ್ಲಿ ಮಳೆಯಾದರೆ ಕೆಆರ್‌ಎಸ್‌ಗೆ ತಲುಪಲು ಕನಿಷ್ಠ ಎರಡು ದಿನವಾದರೂ ಬೇಕು. ಈ ಕಾರಣದಿಂದ ಕೊಡಗಿನಲ್ಲಿ ಕಳೆದ ವಾರ ಸುರಿದ ಮಳೆಯ ಪ್ರಮಾಣದ ನೀರು ಇನ್ನೂ ಜಲಾಶಯಕ್ಕೆ ಹರಿಯುತ್ತಿದೆ.
ಜಲಾಶಯದಲ್ಲಿ 49.45 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ. ಸದ್ಯ ಜಲಾಶಯದಲ್ಲಿ 18.733 ಟಿಎಂಸಿ ನೀರು ಸಂಗ್ರಹವಾಗಿದೆ. ಮುಂಗಾರು ಆರಂಭವಾದಾಗಿನಿಂದ ಸುಮಾರು ಹತ್ತು ಟಿಎಂಸಿ ನೀರು ಜಲಾಶಯಕ್ಕೆ ಬಂದಿದೆ.