newsics.com/ನ್ಯೂಸಿಕ್ಸ್
ಬೆಂಗಳೂರು: ನಗರದ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ನಾರಾಯಣಪುರದಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಇಬ್ಬರು ಎಳೆಹಸುಳೆಗಳು ಬೆಂಕಿಗೆ ಆಹುತಿಯಾಗಿರುವ ಮನಕಲಕುವ ಘಟನೆ ನಡೆದಿದೆ.
ಕೂಲಿ ಕೆಲಸಕ್ಕಾಗಿ ನಗರಕ್ಕೆ ಬಂದಿದ್ದ ಕುಟುಂಬವೊಂದು ನಾರಾಯಣಪುರದಲ್ಲಿ ಶೆಡ್ ಹಾಕಿಕೊಂಡು ವಾಸವಿತ್ತು.
ಐದು ವರ್ಷದ ಅರ್ಜುನ ಹಾಗೂ ಮೂರು ವರ್ಷದ ಆಶಾ ಮೃತಪಟ್ಟ ದುರ್ದೈವಿಗಳು. ಇಂದು ಪೋಷಕರು ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ, ಅಜ್ಜಿ ಮಕ್ಕಳನ್ನು ಶೆಡ್‌ನಲ್ಲಿ ಬಿಟ್ಟು ಸ್ವಲ್ಪ ದೂರ ಹೊರಗಡೆ ಹೋಗಿದ್ದರು. ಈ ವೇಳೆ ಅನಿರೀಕ್ಷಿತವಾಗಿ ಶೆಡ್‌ಗೆ ಬೆಂಕಿ ಹೊತ್ತಿಕೊಂಡಿದೆ.
ಸಜೀವ ದಹನ: ಕ್ಷಣಾರ್ಧದಲ್ಲಿ ಬೆಂಕಿ ಇಡೀ ಶೆಡ್ ಅನ್ನು ಆವರಿಸಿಕೊಂಡಿದ್ದರಿಂದ ಒಳಗೆ ಮಲಗಿದ್ದ ಮಕ್ಕಳಿಗೆ ಹೊರಬರಲು ಸಾಧ್ಯವಾಗದೆ ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮಕ್ಕಳ ಕಿರುಚಾಟ ಕೇಳಿ ಸ್ಥಳೀಯರು ಓಡಿ ಬಂದು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಅಷ್ಟರಲ್ಲೇ ಎಲ್ಲವೂ ಸುಟ್ಟು ಭಸ್ಮವಾಗಿತ್ತು.
ಸ್ಥಳಕ್ಕೆ ಪೊಲೀಸರ ಭೇಟಿ: ಘಟನಾ ಸ್ಥಳಕ್ಕೆ ಕೊತ್ತನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಕಿ ತಗುಲಲು ನಿಖರ ಕಾರಣವೇನು ಎಂಬುದು ಇನ್ನು ತಿಳಿದುಬಂದಿಲ್ಲ ಕೆಲಸಕ್ಕೆ ಹೋಗಿದ್ದ ಪೋಷಕರು ಅಕ್ಷರಶಃ ಬೀದಿಗೆ ಬಿದ್ದಿದ್ದು, ಮಕ್ಕಳನ್ನು ಕಳೆದುಕೊಂಡು ಅವರ ಆಕ್ರಂದನ ಮುಗಿಲು ಮುಟ್ಟಿದೆ.