https://youtube.com/shorts/meQfr5hOsT4?si=–SvccKUHgJJVjWK
Subscribe ನ್ಯೂಸಿಕ್ಸ್ ಕನ್ನಡ
newsics.com
ಗದಗ: ಗುತ್ತಿಗೆದಾರನಿಂದ 5 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಮತ್ತು ಅವರ ಇಬ್ಬರು ಆಪ್ತ ಸಹಾಯಕರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸಣ್ಣ ನೀರಾವರಿ ಇಲಾಖೆಯ ಕಾಮಗಾರಿಗೆ ಸಂಬಂಧಿಸಿದಂತೆ ಡಾ.ಚಂದ್ರು ಲಮಾಣಿ ಗುತ್ತಿಗೆದಾರನ ಬಳಿ
11ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ತಾಲೂಕಿನ ಚಿಂಚಲಿ ಗ್ರಾಮದ ಕ್ಲಾಸ್–೧ಗುತ್ತಿಗೆದಾರ ವಿಜಯ್ ಪೂಜಾರ ಲೋಕಾಯಕ್ತ ಪೊಲೀಸರಿಗೆ ದೂರು ನೀಡಿದ್ದರು.
ಶನಿವಾರ ಮಧ್ಯಾಹ್ನ 2;15 ರ ಸುಮಾರಿಗೆ ಲಕ್ಷ್ಮೇಶ್ವರ ಪಟ್ಟಣದ ಬಾಲಾಜಿ ಆಸ್ಪತ್ರೆಯಲ್ಲಿ ಶಾಸಕ ಡಾ.ಚಂದ್ರು ಲಮಾಣಿ ಮತ್ತು ಅವರ ಇಬ್ಬರು ಆಪ್ತ ಸಹಾಯಕ ಮಂಜುನಾಥ ವಾಲ್ಮೀಕಿ ಮತ್ತು ಗುರು ನಾಯಕ್ 5 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಲೋಕಾಯುಕ್ತ ಪೊಲೀಸರಿಂದ ದಾಖಲೆಗಳ ಪರಿಶೀಲನೆ ಮುಂದುವರಿದಿದೆ. ಲೋಕಾಯುಕ್ತ ಎಸ್ಪಿ ಸಿದ್ಧಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಗದಗ ಲೋಕಾಯುಕ್ತ ಡಿವೈಎಸ್ಪಿ ವಿಜಯ್ ಬಿರಾದಾರ, ಇನ್ಸ್ಪೆಕ್ಟರ್ ಪರಮೇಶ್ ಕವಟಗಿ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ ವೇಳೆ ಆಸ್ಪತ್ರೆ ಕಟ್ಟಡದಲ್ಲಿದ್ದ ಜೇನುಗೂಡಿನಿಂದ ಆಕಸ್ಮಿಕವಾಗಿ ಜೇನುಹುಳುಗಳು ಎದ್ದ ಪರಿಣಾಮ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಶಾಸಕ ಚಂದ್ರು ಲಮಾಣಿ ಸ್ವತಃ ವೈದ್ಯರು ಕೂಡ ಆಗಿದ್ದು ಬಾಲಾಜಿ ಆಸ್ಪತ್ರೆ ಚಂದ್ರು ಲಮಾಣಿ ಅವರ ಒಡೆತನ ಆಸ್ಪತ್ರೆಯಾಗಿದೆ. ಲೋಕಾಯುಕ್ತ ಅಧಿಕಾರಿಗಳ ದಾಳಿ ವೇಳೆ ಶಾಸಕ ಚಂದ್ರು ಲಮಾಣಿ ಹಾಗೂ ಅವರ ಇಬ್ಬರು ಪಿಎಗಳಾದ ಮಂಜುನಾಥ್ ಹಾಗೂ ಗುರುನಾಯಕ್ ಸಹ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸದ್ಯ ಮೂವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಅಧಿಕೃತ ಹೇಳಿಕೆಯ ಪ್ರಕಾರ, ರಸ್ತೆಯ ಎರಡೂ ಬದಿಗಳಲ್ಲಿ ತಡೆಗೋಡೆ ನಿರ್ಮಿಸುವ ಸಣ್ಣ ನೀರಾವರಿ ಇಲಾಖೆಯ ಕೆಲಸವನ್ನು ನಿರ್ವಹಿಸಲು ಗದಗದ ಚಿಂಚೋಳಿಯ ಕ್ಲಾಸ್-1 ಗುತ್ತಿಗೆದಾರ ವಿಜಯ್ ಪೂಜಾರ್ ಅವರಿಂದ ಚಂದ್ರು ಲಮಾಣಿ 11 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಆದರೆ ಈ ಬಗ್ಗೆ ದೂರುದಾರರು ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿದರು. ಭ್ರಷ್ಟಾಚಾರ ತಡೆ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿ ಆರೋಪಿಗಳನ್ನು 5 ಲಕ್ಷ ರೂ. ಲಂಚ ಪಡೆಯುವಾಗ ಬಂಧಿಸಿದರು.