newsics.com
ಬಹುತೇಕ ಜನರ ದಿನ ಆರಂಭವಾಗುವುದೇ ಟೀ ಅಥವಾ ಕಾಫಿಯಿಂದ. ದಿನಕ್ಕೆ ಒಂದು ಕಪ್ ಕಾಫಿ-ಟೀ ಕುಡಿಯಲಿಲ್ಲ ಅಂದ್ರೆ ಆ ದಿನ ಏನೋ ಮಿಸ್ ಮಾಡಿಕೊಂಡಂತೆ ಜನರು ಚಡಪಡಿಸುತ್ತಾರೆ.
ಇಂದು ನಾನಾ ಬಗೆಯ ಚಹಾಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಆದರೆ, ಅವರವರ ರುಚಿ ಮತ್ತು ಆರೋಗ್ಯಕ್ಕೆ ತಕ್ಕಂತೆ ಗ್ರೀನ್ ಟೀ, ಬ್ಲಾಕ್ ಟೀ, ಲೆಮನ್ ಟೀ, ಹಾಲಿನ ಟೀ ಕುಡಿಯುತ್ತಾರೆ. ಇನ್ನು ನೀವು ಪುದಿನಾ ಚಹಾ ಬಗ್ಗೆ ಕೇಳಿರಬಹುದು. ಆಹಾರದ ಸುವಾಸನೆಗಾಗಿ ಮಾತ್ರ ಪುದೀನವನ್ನು ಸೇರಿಸುತ್ತಾರೆ ಎಂದು ಬಹುತೇಕರು ಭಾವಿಸಿದ್ದಾರೆ. ಆದರೆ, ಇದರಲ್ಲಿ ಸಾಕಷ್ಟು ಔಷಧೀಯ ಗುಣಗಳಿದ್ದು, ಇದೊಂದು ಉತ್ತಮ ಗಿಡಮೂಲಿಕೆಯಾಗಿದೆ. ಇದರಲ್ಲಿ ರಂಜಕ, ಕ್ಯಾಲ್ಸಿಯಂ, ಕಾರ್ಬೋಹೈಡ್ರೆಟ್‌ಗಳು, ಕಬ್ಬಿಣ ಮತ್ತು ವಿಟಮಿನ್ ಎ ನಂತಹ ಪೋಷಕಾಂಶಗಳು ಸಮೃದ್ಧವಾಗಿದೆ. ಪುದೀನಾವನ್ನು ಸೇವಿಸುವುದರಿಂದ ಅಸ್ತಮಾ ರೋಗಿಗಳ ಉಸಿರಾಟದ ತೊಂದರೆಯನ್ನು ಕಡಿಮೆ ಮಾಡಬಹುದು.
ರಾತ್ರಿಯಿಡೀ ಒಂದು ಕಪ್ ನೀರಿನಲ್ಲಿ ಕೆಲವು ಪುದೀನ ಎಲೆಗಳನ್ನು ಹಾಕಿ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ, ನಿಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ಪಡೆಯುತ್ತೀರಿ. ಅಲ್ಲದೆ, ಟೀ ರೂಪದಲ್ಲೂ ಇದನ್ನು ಸೇವಿಸಬಹುದು. ಅಂದರೆ, ನೀರಿನಲ್ಲಿ ಪುದೀನಾ ಎಲೆಗಳನ್ನು ಕುದಿಸಿ, ಆರಿಸಿ ಸವಿಯಬಹುದು. ಈ ಎಲೆಯು ದೇಹದಲ್ಲಿರುವ ಹಲವಾರು ಸಮಸ್ಯೆಗಳನ್ನು ಸಂಪೂರ್ಣವಾಗಿ ನಿವಾರಿಸುತ್ತದೆ. ಇದನ್ನು ಪ್ರತಿನಿತ್ಯ ಆಹಾರದಲ್ಲಿ ಸೇರಿಸಿಕೊಂಡರೆ ಹೊಟ್ಟೆಯ ಆಮ್ಲ, ಅಜೀರ್ಣ ಹಾಗೂ ಗ್ಯಾಸ್‌ನಂತಹ ಸಮಸ್ಯೆಗಳು ದೂರವಾಗುತ್ತವೆ.
ಇನ್ನು ಪ್ರತಿದಿನ ಪುದೀನಾ ಟೀ ಕುಡಿದರೆ ಬಾಯಿಯ ದುರ್ವಾಸನೆ ದೂರವಾಗುತ್ತದೆ. ಪುದೀನಾ ನೈಸರ್ಗಿಕ ಬ್ಯಾಕ್ಟಿರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಬಾಯಿಯ ದುರ್ವಾಸನೆಗೆ ಕಾರಣವಾಗುವ ಬ್ಯಾಕ್ಟಿರಿಯಾವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಪೂರ್ಣ ಸಮಯ ಕೆಲಸ ಮಾಡುವ ಜನರು ಹೆಚ್ಚು ಆರೋಗ್ಯ ಸಮಸ್ಯೆಯಿಂದ ಬಳಲುತ್ತಾರೆ. ಹೀಗಾಗಿ ಪ್ರತಿದಿನ ಪುದೀನಾ ಚಹಾ ಕುಡಿಯುವುದು ಒಳ್ಳೆಯದು. ಇದರಿಂದ ದೈಹಿಕ ಒತ್ತಡವಿಲ್ಲದೆ ಮನಸ್ಸು ಸ್ಥಿರವಾಗಿರುತ್ತದೆ.