Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಫರಿದಾಬಾದ್ನ ಖಾಸಗಿ ಸಂಸ್ಥೆಯಾದ Al-Falah ವಿಶ್ವವಿದ್ಯಾಲಯ (AFU) ಇದೀಗ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಸುದ್ದಿಯಲ್ಲಿದೆ.
ದೆಹಲಿಯ ಕೆಂಪು ಕೋಟೆಯ ಬಳಿ ನಡೆದ ಕಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಈ ವಿಶ್ವವಿದ್ಯಾಲಯದ ವೈದ್ಯರಾದ ಡಾ. ಉಮರ್ ಉನ್ ನಬಿ ಮತ್ತು ಡಾ.ಮುಜಮ್ಮಿಲ್ ಶಕೀಲ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ ಎಂಬ ಆರೋಪಗಳು ಹೊರಬಿದ್ದಿವೆ.
ಈ ಆರೋಪದಿಂದ ಇಡೀ ದೇಶವೇ ಬೆಚ್ಚಿಬಿದ್ದಿದೆ. ಈ ಘಟನೆ ನಡೆದ ನಂತರ, ಸಂಸ್ಥೆ ತೀವ್ರ ತನಿಖೆಗೆ ಒಳಗಾಗಿದೆ.
ಈ ಬೆಳವಣಿಗೆಗಳ ಮಧ್ಯೆ, Al-Falah ವಿಶ್ವವಿದ್ಯಾಲಯಕ್ಕೆ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ಒಕ್ಕೂಟವಾದ ಅಸೋಸಿಯೇಷನ್ ಆಫ್ ಆಲ್ ಇಂಡಿಯನ್ ಯೂನಿವರ್ಸಿಟೀಸ್ (AIU), ಈ ಸಂಸ್ಥೆಗೆ ನೀಡಿದ್ದ ಸದಸ್ಯತ್ವವನ್ನು ತಕ್ಷಣವೇ ರದ್ದುಗೊಳಿಸಿದೆ.
ಅಸೋಸಿಯೇಷನ್ ಆಫ್ ಆಲ್ ಇಂಡಿಯನ್ ಯೂನಿವರ್ಸಿಟೀಸ್ (AIU) ಸಂಸ್ಥೆಯು, Al-Falah ವಿಶ್ವವಿದ್ಯಾಲಯದಲ್ಲಿ ಸೂಕ್ತ ಪರಿಸ್ಥಿತಿಗಳು (Lack of good standing) ಇಲ್ಲ ಎಂದು ಹೇಳಿ ಅದರ ಸದಸ್ಯತ್ವವನ್ನು ರದ್ದುಗೊಳಿಸಿದೆ.
AIU ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿರುವಂತೆ, AIU ನಿಯಮಾವಳಿಗಳ ಪ್ರಕಾರ, ಯಾವುದೇ ವಿಶ್ವವಿದ್ಯಾಲಯವು ‘ಉತ್ತಮ ಸ್ಥಿತಿಯಲ್ಲಿರುವ’ ಅವಧಿಯವರೆಗೆ ಮಾತ್ರ ಸದಸ್ಯತ್ವವನ್ನು ಹೊಂದಿರುತ್ತದೆ. ಆದರೆ ಮಾಧ್ಯಮ ವರದಿಗಳ ಪ್ರಕಾರ, ಫರಿದಾಬಾದ್ನ Al-Falah ವಿಶ್ವವಿದ್ಯಾಲಯವು ಉತ್ತಮ ಸ್ಥಿತಿಯಲ್ಲಿಲ್ಲ ಎಂಬುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ, ವಿಶ್ವವಿದ್ಯಾಲಯದ ಸದಸ್ಯತ್ವವನ್ನು ತಕ್ಷಣದಿಂದ ಅಮಾನತುಗೊಳಿಸಲಾಗಿದೆ ಎಂದು AIU ಸ್ಪಷ್ಟಪಡಿಸಿದೆ.
ನ್ಯಾಷನಲ್ ಅಸೆಸ್ಮೆಂಟ್ ಅಂಡ್ ಅಕ್ರೆಡಿಟೇಶನ್ ಕೌನ್ಸಿಲ್ (NAAC) ಇತ್ತೀಚೆಗೆ Al-Falah ವಿಶ್ವವಿದ್ಯಾಲಯಕ್ಕೆ ನಕಲಿ ಮಾನ್ಯತೆ ಆರೋಪದ ಹಿನ್ನೆಲೆಯಲ್ಲಿ ನೋಟಿಸ್ ನೀಡಿದೆ.
NAAC ತಿಳಿಸಿರುವಂತೆ, ಈ ವಿಶ್ವವಿದ್ಯಾಲಯವು ಯಾವುದೇ ಅಧಿಕೃತ ಮಾನ್ಯತೆ ಪಡೆದಿಲ್ಲ ಹಾಗೂ ಮೌಲ್ಯಮಾಪನ ಪ್ರಕ್ರಿಯೆಗೆ ಸಹ ಸ್ವಯಂಪ್ರೇರಿತವಾಗಿ ಮುಂದಾಗಿಲ್ಲ. ಆದರೂ ತನ್ನ ವೆಬ್ಸೈಟ್ನಲ್ಲಿ ತಪ್ಪಾಗಿ ಮಾನ್ಯತೆ ಪಡೆದ ಸಂಸ್ಥೆಯೆಂದು ಪ್ರದರ್ಶಿಸಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಕೆಂಪು ಕೋಟೆ ಸ್ಫೋಟದ ಬಳಿಕ, ತನಿಖಾಧಿಕಾರಿಗಳು Al-Falah ವಿಶ್ವವಿದ್ಯಾಲಯದ ವಿರುದ್ಧ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ಫರಿದಾಬಾದ್ ಪೊಲೀಸರು ವಿಶ್ವವಿದ್ಯಾಲಯದ ಬೋಧಕವರ್ಗ ಹಾಗೂ ವಿದ್ಯಾರ್ಥಿಗಳನ್ನು ಒಳಗೊಂಡು ಕನಿಷ್ಠ 52 ಜನರನ್ನು ವಿಚಾರಣೆಗಾಗಿ ಕರೆಸಿದ್ದಾರೆ.
ತನಿಖೆಯ ಭಾಗವಾಗಿ, ಡಾ. ಮುಜಮ್ಮಿಲ್ ಅವರ ಸಹೋದ್ಯೋಗಿಗಳು ಮತ್ತು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರನ್ನು ಸಹ ವಿಚಾರಣೆ ನಡೆಸಲಾಗಿದೆ. ದೆಹಲಿ ಸ್ಫೋಟ ಪ್ರಕರಣದಲ್ಲಿ ಅಧಿಕಾರಿಗಳು ಈಗಾಗಲೇ ಈ ವಿಶ್ವವಿದ್ಯಾಲಯಕ್ಕೆ ಸೇರಿದ ಡಾ. ಶಾಹಿನ್, ಡಾ. ಮುಜಮ್ಮಿಲ್ ಗನೈ, ಡಾ. ಅದೀಲ್ ಅಹ್ಮದ್ ರಥರ್ ಮತ್ತು ಡಾ. ಅಹ್ಮದ್ ಮೊಹಿಯುದ್ದೀನ್ ಸಯ್ಯದ್ ಸೇರಿದಂತೆ ಅನೇಕರನ್ನು ಬಂಧಿಸಿದ್ದಾರೆ. ವಿಚಾರಣೆಯಿಂದ, ಇವರು ದೇಶದ ನಾಲ್ಕು ಪ್ರಮುಖ ಪ್ರದೇಶಗಳಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಸಂಚು ರೂಪಿಸಿದ್ದರೆಂಬ ಮಾಹಿತಿ ಬಹಿರಂಗವಾಗಿದೆ.
Holiday list 2026ರ ರಜೆ ಪಟ್ಟಿ ಪ್ರಕಟಿಸಿದ ರಾಜ್ಯ ಸರ್ಕಾರ: ಸಮಗ್ರ ಪಟ್ಟಿ ನೋಡಿ
Terrorists plan ಡಿ.6ರಂದು ದೇಶದ 32 ಕಡೆ ದೆಹಲಿ ಮಾದರಿ ಸ್ಫೋಟ ನಡೆಸಲು ಸಿದ್ಧತೆ ನಡೆಸಿದ್ದ ಉಗ್ರರು