newsics.com
ಬೆಂಗಳೂರು : ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಇದೀಗ ಇಂದು ಬಿಜೆಪಿ ಶಾಸಕ ಭೈರತಿ ಬಸವರಾಜ್ ಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ.
ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಒಂದೂವರೆ ಲಕ್ಷ ರೂಪಾಯಿ ಸುಪಾರಿ ಪಡೆದಿದ್ದ ಗ್ಯಾಂಗ್ ಅಂದರ್ ಆಗಿದ್ದಾರೆ. ಅದರಂತೆ ಇದೀಗ ಪ್ರಕರಣದಲ್ಲಿ A5 ಆರೋಪಿಯಾಗಿರುವ ಶಾಸಕ ಬೈರತಿ ಬಸವರಾಜ್ ವಿರುದ್ಧ ಸಾಕ್ಷ್ಯ ಪತ್ತೆಗೆ ಮುಂದಾಗಿದ್ದಾರೆ.
ಈ ಹಿನ್ನಲೆ ಇಂದು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದು, ವಿಚಾರಣೆಯ ವೇಳೆ ಏನಾದರೂ ಸಾಕ್ಷ್ಯ ಸಿಕ್ಕಿದರೆ ಶಾಸಕ ಬೈರತಿ ಬಸವರಾಜ್ ರನ್ನು ಬಂಧಿಸುವ ಎಲ್ಲಾ ಸಾದ್ಯತೆ ಇದೆ ಎನ್ನಲಾಗಿದೆ.
ಇನ್ನು ಬಿಕ್ಲು ಶಿವ ಪದೇ ಪದೇ ಫೇಸ್ ಬುಕ್ ನಲ್ಲಿ ಲೈವ್ ಬಂದು ಮತ್ತೋರ್ವ ರೌಡಿ ಶೀಟರ್ ಜಗದೀಶ್ ಅಲಿಯಾಸ್ ಜಗ್ಗ ವಿರುದ್ಧ ಬಾಯಿಗೆ ಬಂದ ಹಾಗೆ ಬಯ್ಯುತ್ತಿದ್ದ. ಅಷ್ಟೇ ಅಲ್ಲದೆ ಈ ಹಿಂದೊಮ್ಮೆ ಕೋರ್ಟ್ ನಲ್ಲಿ ಇಬ್ಬರು ಮುಖಮುಖಿಯಾಗಿದ್ದಾಗ ಇಬ್ಬರ ನಡುವೆ ಮಾತಿನ ಚಕಮಕಿ ಕೂಡ ಆಗಿತ್ತು.
ಈ ವೇಳೆ ಬಿಕ್ಲು ಶಿವ ರೋಷದಿಂದ ಏಯ್.. ಎನ್ ಮಾಡ್ಕೊಳ್ತಿಯಾ ಮಾಡ್ಕೋ ಹೋಗ್ ಎಂದು ಆವಾಜ್ ಹಾಕಿದ್ದ.. ಇದೇ ವಿಚಾರಕ್ಕೆ ಜಗದೀಶ್ ಅಂಡ್ ಗ್ಯಾಂಗ್ ಕೊಲೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಒಂದೂವರೆ ಲಕ್ಷ ರೂಪಾಯಿ ಸುಪಾರಿ ಪಡೆದು ಕೊಲೆ ಮಾಡಿದ್ದ ಕೋಲಾರದ ಮಾಲೂರು ಮೂಲದ ನರಸಿಂಹ, ಮುರುಗೇಶ್, ಸುದರ್ಶನ, ಅವಿನಾಶ್ ದಿನ್ನಹಳ್ಳಿ ಎಂಬ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಮಲ್ ಎಂಬಾತನಿಂದ ಆರೋಪಿ ನರಸಿಂಹಗೆ ಸುಪಾರಿ ನೀಡಲಾಗಿತ್ತು ಎಂದು ತನಿಖೆಯ ವೇಳೆ ಬಯಲಾಗಿದೆ.
ಸದ್ಯ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ 11 ಜನರನ್ನು ಬಂಧಿಸಿದ್ದು, ಆದರೆ A1 ಆರೋಪಿಯಾಗಿರುವ ಜಗದೀಶ್ ಅಲಿಯಾಸ್ ಜಗ್ಗ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಇನ್ನು ಇಂದು ಶಾಸಕರು ವಿಚಾರಣೆಗೆ ಹಾಜರಾಗಲಿದ್ದು, ಪ್ರಮುಖ ಅಂಶ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.
DHARMASTHALA CRIME ಧರ್ಮಸ್ಥಳ ಪ್ರಕರಣ: ಎಸ್‌ಐಟಿ ತಂಡಕ್ಕೆ ಹೆಚ್ಚುವರಿ 20 ಖಡಕ್ ಅಧಿಕಾರಿಗಳ ನೇಮಕ