newsics.com
ಅಭಿನಯ ಶಾರದೆ ಬಿ. ಸರೋಜಾ ದೇವಿ ಅವರು ಇಂದು ತಮ್ಮ ಬೆಂಗಳೂರಿನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಸರೋಜಾ ದೇವಿ ಅವರ ನಿಧನವು ಕೇವಲ ಒಬ್ಬ ನಟಿಯ ನಿರ್ಗಮನವಲ್ಲ, ಅದು ಕನ್ನಡ ಸಂಸ್ಕೃತಿಯ ಒಂದು ಪ್ರಮುಖ ಭಾಗವೇ ನಮ್ಮನ್ನು ಅಗಲಿದಂತೆ.
1955ರಲ್ಲಿ ‘ಮಹಾಕವಿ ಕಾಳಿದಾಸ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸರೋಜಾ ದೇವಿ ಅವರು ಮತ್ತೆಂದೂ ಹಿಂತಿರುಗಿ ನೋಡಲೇ ಇಲ್ಲ. ಮುಂದಿನ ಮೂರು ದಶಕಗಳ ಕಾಲ ಅವರು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗವನ್ನು ತಮ್ಮ ಅದ್ಭುತ ಅಭಿನಯದಿಂದ ಆಳಿದರು. ಆದರೆ ಇಲ್ಲಿ ಮತ್ತೊಂದು ಬೇಸರದ ಸಂಗತಿ ಅಂದ್ರೆ ಬಿ ಸರೋಜಾದೇವಿಯವರು ಕೊನೆಯದಾಗಿ ಕನ್ನಡದಲ್ಲಿ ಅಪ್ಪು ಜೊತೆ ನಟಿಸಿದ್ದರು. 2019ರಲ್ಲಿ ತೆರೆಕಂಡ ನಟ ಸಾರ್ವಭೌಮ ಸಿನಿಮಾದಲ್ಲಿ ನಟಿಸಿದ್ದರು. ಇಂದು ಇಬ್ಬರು ಕೂಡ ನಮ್ಮ ಜೊತೆ ಇಲ್ಲ.
ಕನ್ನಡದಲ್ಲಿ, ವರನಟ ಡಾ. ರಾಜ್‌ಕುಮಾರ್ ಅವರೊಂದಿಗೆ ಸರೋಜಾ ದೇವಿ ಅವರ ಜೋಡಿ ಎಂದರೆ ಅದು ಗೆಲುವಿನ ಸೂತ್ರವೇ ಆಗಿತ್ತು. ‘ಕಿತ್ತೂರು ಚೆನ್ನಮ್ಮ’ನಾಗಿ ಅವರ ಗತ್ತು, ‘ಸ್ಕೂಲ್ ಮಾಸ್ಟರ್’ ಚಿತ್ರದ ಮುಗ್ಧತೆ, ‘ಅಮರಶಿಲ್ಪಿ ಜಕಣಾಚಾರಿ’ಯ ಚೆಲುವು ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.
ಸರೋಜಾ ದೇವಿ ಅವರ ಯಶಸ್ಸಿನ ಗುಟ್ಟು ಅವರ ಸೌಂದರ್ಯ ಮಾತ್ರವಾಗಿರಲಿಲ್ಲ. ಪಾತ್ರಗಳಿಗೆ ಜೀವ ತುಂಬುವ ಅವರ ಸಾಮರ್ಥ್ಯ ಅನನ್ಯವಾಗಿತ್ತು. ದುಃಖದ ದೃಶ್ಯಗಳಲ್ಲಿ ಕಣ್ಣೀರು ಹಾಕದೆ, ಕೇವಲ ಕಣ್ಣಿನ ನೋಟದಲ್ಲೇ ನೋವನ್ನು ವ್ಯಕ್ತಪಡಿಸುತ್ತಿದ್ದ ಅವರ ನಟನೆಗೆ ‘ಅಭಿನಯ ಶಾರದೆ’ ಎಂಬ ಬಿರುದು ತಾನಾಗಿಯೇ ಒಲಿದು ಬಂದಿತ್ತು.
ಸರೋಜಾದೇವಿಯ ನಗು, ನಾಟ್ಯ, ಸಂಭಾಷಣೆ ಹೇಳುವ ರೀತಿ ಎಲ್ಲವೂ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತಿತ್ತು. ಅವರು ಕೇವಲ ನಟಿಯಾಗಿರಲಿಲ್ಲ, ಅದೆಷ್ಟೋ ಯುವತಿಯರಿಗೆ ಸ್ಫೂರ್ತಿಯಾಗಿದ್ದರು.
Gold Price: ಆಷಾಢದ ಬಳಿಕ ಚಿನ್ನದ ಬೆಲೆಯಲ್ಲಿ ಇಳಿಕೆ? ವರ್ಲ್ಡ್ ಗೋಲ್ಡ್ ಕೌನ್ಸಿಲ್ ವರದಿಯಲ್ಲಿ ಏನಿದೆ?