newsics.com
ಪಟನಾ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂಬುದಾಗಿ ಸಲ್ಲಿಕೆಯಾದ ಹಲವು ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮಹತ್ವದ ಮುನ್ನಡೆ ಸಾಧಿಸಿದ್ದು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕಿಂಗ್‌ಪಿನ್ ಆಗಿರುವ ರಾಕೇಶ್ ರಂಜನ್ ಎಂಬಾತನನ್ನು ಬಂಧಿಸಿದ್ದಾರೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಆರೋಪಿಗಳನ್ನು ಸಿಬಿಐ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದರ ಮಧ್ಯೆಯೇ, ಬಿಹಾರದ ಪಟನಾದಲ್ಲಿ ಎರಡು ಕಡೆ ಹಾಗೂ ಪಶ್ಚಿಮ ಬಂಗಾಳದ ಕೋಲ್ಕೊತಾದಲ್ಲಿ ಎರಡು ಕಡೆ ಸಿಬಿಐ ಅಧಿಕಾರಿಗಳು ಗುರುವಾರ (ಜುಲೈ 11) ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಬಿಹಾರದ ಪಟನಾದಲ್ಲಿ ರಾಕೇಶ್ ರಂಜನ್ ಅಲಿಯಾಸ್ ರಾಕಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಈತನನ್ನು ಕೋರ್ಟ್‌ಗೂ ಹಾಜರುಪಡಿಸಲಾಗಿದ್ದು, 10 ದಿನ ಸಿಬಿಐ ಕಸ್ಟಡಿಗೆ ನೀಡಲಾಗಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಹಾಗೂ ಪಶ್ಚಿಮ ಬಂಗಾಳದಲ್ಲಿ ಅಧಿಕಾರಿಗಳು ಶೋಧ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.