newsics.com
ಕಥುವಾ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಮಚೇಡಿ ಪ್ರದೇಶದಲ್ಲಿ ಸೋಮವಾರ ಉಗ್ರರು ಸೇನಾ ವಾಹನಗಳ ಮೇಲೆ ಹೊಂಚು ದಾಳಿ ನಡೆಸಿದ್ದರಿಂದ ನಾಲ್ವರು ಯೋಧರು ಹುತಾತ್ಮರಾಗಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಥುವಾ ಪಟ್ಟಣದಿಂದ 150 ಕಿ.ಮೀ ದೂರದಲ್ಲಿರುವ ಲೋಹೈ ಮಲ್ಹಾರ್‌ನ ಬದ್ನೋಟಾ ಗ್ರಾಮದ ಬಳಿಯ ಕಿಂಡ್ಲಿ-ಮಲ್ಹಾರ್ ರಸ್ತೆಯಲ್ಲಿ ಮಧ್ಯಾಹ್ನ 3.30 ರ ಸುಮಾರಿನಲ್ಲಿ ಉಗ್ರರು ಹೊಂಚು ಹಾಕಿ, ಸೇನಾ ವಾಹನದ ಮೇಲೆ ಗ್ರೇನೆಡ್ ಹಾಗೂ ಗುಂಡಿನ ದಾಳಿ ನಡೆಸಿದ್ದಾರೆ.
ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿವೆ. ಆದರೆ ಉಗ್ರರು ಸಮೀಪದ ಅರಣ್ಯಕ್ಕೆ ಓಡಿಹೋದರು. ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಭಯೋತ್ಪಾದಕರು ಇತ್ತೀಚೆಗೆ ಗಡಿಯಿಂದ ಒಳನುಸುಳುತ್ತಿದ್ದು, ಎತ್ತರದ ಪ್ರದೇಶಗಳಿಗೆ ತೆರಳುತ್ತಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಒಟ್ಟು 10 ಸೈನಿಕರು ಗಾಯಗೊಂಡಿದ್ದರು. ಅವರಲ್ಲಿ ನಾಲ್ವರು ನಂತರ ಹುತಾತ್ಮರಾದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಥುವಾ ಜಿಲ್ಲೆಯಲ್ಲಿ ಕಳೆದ ನಾಲ್ಕು ವಾರಗಳಲ್ಲಿ ನಡೆದ ಎರಡನೇ ಪ್ರಮುಖ ಘಟನೆ ಇದಾಗಿದೆ.
ಜೂನ್ 12 ಮತ್ತು 13 ರಂದು, ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತ್ಯೆಗೀಡಾಗಿದ್ದರು. ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಯೋಧರೊಬ್ಬರು ಹುತಾತ್ಮರಾಗಿದ್ದರು.
ಜೂನ್ 26 ರಂದು ದೋಡಾ ಜಿಲ್ಲೆಯ ಗಂಡೋ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದಿದ್ದ ಗುಂಡಿನ ಚಕಮಕಿಯಲ್ಲಿ ಮೂವರು ವಿದೇಶಿ ಉಗ್ರರು ಸಾವನ್ನಪ್ಪಿದ್ದರು.
ಕಾಲೇಜು ವಿದ್ಯಾರ್ಥಿನಿಯರಿಗೆ ಮರ್ಮಾಂಗ ತೋರಿಸಿ ಪರಾರಿಯಾಗಿದ್ದ ಕಾಮುಕನ ಬಂಧನ, ಪೊಲೀಸರ ಪ್ರಶ್ನೆಗೆ ಉಡಾಫೆ ಉತ್ತರ!
ಬಿ.ಸಿ. ಪಾಟೀಲ್ ಅಳಿಯ ಪ್ರತಾಪ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ? ಆ ಕೊರಗೇ ಸಾವಿನವರೆಗೆ ಕರೆದೊಯ್ದಿತಾ?
‘ಮಹಿಳೆಯರನ್ನು ಗರ್ಭಿಣಿಯರನ್ನಾಗಿಸಿ ಲಕ್ಷಾಂತರ ರೂಪಾಯಿ ಹಣ ಸಂಪಾದಿಸಿ’ ಜಾಹೀರಾತಿನ ಅಸಲಿಯತ್ತು ಬಯಲು, ಇಬ್ಬರ ಬಂಧನ