newsics.com
ನವದೆಹಲಿ : ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಯುವತಿ ಅಥವಾ ಮಹಿಳೆ ಒಂದುವೇಳೆ ಗರ್ಭಿಣಿಯಾದರೆ ಆಕೆಗೆ ತನ್ನ ಗರ್ಭಧಾರಣೆಯನ್ನು ಅಂತ್ಯಗೊಳಿಸುವ ಹಕ್ಕಿದೆ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಲೈಂಗಿಕ ದೌರ್ಜನ್ಯಕ್ಕೊಳಗಾದ 17 ವರ್ಷದ ಬಾಲಕಿ ಸಲ್ಲಿಸಿದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಿಚಾರಣೆ ನಡೆಸುತ್ತಿದ್ದು, ಅಪ್ರಾಪ್ತ ವಯಸ್ಕಳಾಗಿರುವುದರಿಂದ ಆಕೆ ತನಗೆ ಮಗುವಿನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದೆ.
17 ವರ್ಷದ ಬಾಲಕಿ ನೀಡಿದ ದೂರಿನ ಅನ್ವಯ, ಆಕೆ ಪ್ರೀತಿಸುತ್ತಿದ್ದ ಆರೋಪಿಯು ತನ್ನೊಂದಿಗೆ ಮನೆ ಬಿಟ್ಟು ಬರುವಂತೆ ಆಮಿಷವೊಡ್ಡಿದ್ದ. ಆದರೆ, ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ ಬಳಿಕ ಅವಳಿಂದ ದೂರವಾಗಿದ್ದ. ಆಕೆಯಿನ್ನೂ ಅಪ್ರಾಪ್ತೆಯಾಗಿರುವ ಕಾರಣದಿಂದ ತಾನು ಮಗುವಿನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಬಯಸುವುದಿಲ್ಲ ಎಂದು ಹೇಳುವ ಮೂಲಕ ಅವಳು ಕೋರ್ಟ್ ಮೆಟ್ಟಿಲೇರಿದ್ದಳು. ಅವಳು ಈಗ 19 ವಾರಗಳ ಗರ್ಭಿಣಿಯಾಗಿದ್ದಾಳೆ. ಈ ಗರ್ಭಧಾರಣೆಯು ತನಗೆ ದುಃಖವನ್ನು ಉಂಟುಮಾಡುತ್ತಿದೆ ಮತ್ತು ಮಾನಸಿಕ ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂದು ವಾದದಲ್ಲಿ ತಿಳಿಸಲಾಗಿತ್ತು.
ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಮುಕ್ತಾಯಗೊಳಿಸಲು ಅವಕಾಶ ನೀಡುವ ಸುಪ್ರೀಂ ಕೋರ್ಟ್ ಮತ್ತು ದೆಹಲಿ ಹೈಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದ ಹೈಕೋರ್ಟ್, ಲೈಂಗಿಕ ದೌರ್ಜನ್ಯದಿಂದ ಗರ್ಭ ಧರಿಸಿದ ಮಹಿಳೆ ಆ ಮಗುವನ್ನು ಇಟ್ಟುಕೊಳ್ಳುವುದಕ್ಕೆ ಒಪ್ಪುವ ಅಥವಾ ನಿರಾಕರಿಸುವ ಹಕ್ಕನ್ನು ಹೊಂದಿದ್ದಾಳೆ. ಆ ಮಗುವನ್ನು ಇಟ್ಟುಕೊಳ್ಳಬೇಕೆ ಅಥವಾ ಬೇಡವೇ ಎಂಬುದನ್ನು ಆ ಮಹಿಳೆಯೇ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಮಹೇಶ್ ಚಂದ್ರ ತ್ರಿಪಾಠಿ ಮತ್ತು ಪ್ರಶಾಂತ್ ಕುಮಾರ್ ಅವರನ್ನೊಳಗೊಂಡ ಇಬ್ಬರು ನ್ಯಾಯಾಧೀಶರ ಪೀಠವು 17 ವರ್ಷದ ಅತ್ಯಾಚಾರ ಸಂತ್ರಸ್ತೆಯ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಅಂತ್ಯಗೊಳಿಸಲು ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದೆ.
ಅತ್ಯಾಚಾರದಿಂದ ಯುವತಿ ಅಥವಾ ಮಹಿಳೆ ಗರ್ಭಿಣಿಯಾದರೆ ಆ ಮಗುವನ್ನು ಉಳಿಸಿಕೊಳ್ಳಬೇಕೇ, ಬೇಡವೇ ಎಂದು ನಿರ್ಧರಿಸಲು ಆಕೆಗೆ ಹಕ್ಕಿದೆ. ಕಾನೂನು ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಗೆ ತನ್ನ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಅಂತ್ಯಗೊಳಿಸಲು ಹಕ್ಕನ್ನು ಒದಗಿಸುತ್ತದೆ ಎಂದು ಕೋರ್ಟ್ ಹೇಳಿದೆ.