newsics.com
ನವದೆಹಲಿ: ಸದಾ ವಾಹನಗಳಿಂದ ಗಿಜಿಗುಡುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಕಿಯ ಮಳೆ ಸುರಿದಿದೆ. ಇದರಿಂದ ವಾಹನ ಸವಾರರು ಕೆಲ ಕಾಲ ಕಂಗಾಲಾದರು.
ದೆಹಲಿಯ ಉಪನಗರ ಹರಿಯಾಣದ ಗುರ್ಗಾಂವ್‌ನಲ್ಲಿ ಈ ಘಟನೆ ನಡೆದಿದ್ದು, ಹೆದ್ದಾರಿಯಲ್ಲಿ ಹೋಗುತ್ತಿರುವ ವಾಹನಗಳ ಮೇಲೆ ಬೀಳುತ್ತಿರುವ ಬೆಂಕಿಯ ಕಿಡಿಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತೀವ್ರ ಚಳಿಯಿಂದ ತತ್ತರಿಸಿರುವ ದೆಹಲಿಯಲ್ಲಿ ಬೆಂಕಿಯ ಮಳೆ ಎಲ್ಲಿಂದ ಬಂತು ಎನ್ನುವ ಪ್ರಶ್ನೆ ನಿಮ್ಮನ್ನು ಕಾಡ್ತಿದ್ಯಾ?
ರಾಷ್ಟ್ರೀಯ ಹೆದ್ದಾರಿ 8ರಲ್ಲಿ ವಾಣಿಜ್ಯ ಜಾಹೀರಾತು ಫಲಕ ಅಳವಡಿಸಲು ವೆಲ್ಡಿಂಗ್ ಕೆಲಸ ಮಾಡಲಾಗುತ್ತಿದೆ. ಕೆಳಗಡೆ ವಾಹನಗಳು ಓಡಾಡುತ್ತಿವೆ. ಯಾವುದೇ ಸುರಕ್ಷತೆ ಕ್ರಮ ಇಲ್ಲದೆ ವೆಲ್ಡಿಂಗ್ ಮಾಡಲಾಗುತ್ತಿದ್ದು, ಅದರ ಬೆಂಕಿಯ ಕಿಡಿಗಳು ವಾಹನಗಳ ಮೇಲೆ ಮಳೆ ಹನಿಗಳಂತೆ ಉದುರುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಚಲಿಸುತ್ತಿದ್ದ ಕಾರು, ಬಸ್‌ಗಳಲ್ಲದೇ ಬೈಕ್‌ಗಳ ಮೇಲೆ ಕಿಡಿ ಬಿದ್ದಿದೆ. ಬೈಕ್ ಸವಾರನ ಮೇಲೆ ಕಿಡಿ ಬಿದ್ದಿದ್ದು ಕೆಲವರ ತಲೆ, ಬಟ್ಟೆಗೆ ಹಾನಿಯಾಗಿದೆ.
ಘಟನೆಯ ವಿಡಿಯೋವನ್ನು ವೈದ್ಯರೊಬ್ಬರು ಟ್ವಿಟರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಭದ್ರತೆಯ ಲೋಪದ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದೆ ಈ ರೀತಿ ಆಗದಂತೆ ಸಾಕಷ್ಟು ಮುಂಜಾಗ್ರತೆ ವಹಿಸಲಾಗುವುದು ಸಂಚಾರ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.