newsics.com
ಹಾಸನ: ವರದಕ್ಷಿಣೆ ತರುವಂತೆ ಚಿತ್ರಹಿಂಸೆ ನೀಡಿ 3 ತಿಂಗಳ ಗರ್ಭಿಣಿಯನ್ನು ಪತಿಯೇ ಕೊಲೆಗೈದ ಘಟನೆ ಹಾಸನದ ನೊರನಕ್ಕಿ ಗ್ರಾಮದಲ್ಲಿ ನಡೆದಿದೆ.
ನಯನಾ (24) ಮೃತ ಮಹಿಳೆ ಎಂದು ತಿಳಿದುಬಂದಿದೆ. ಮೂರು ವರ್ಷಗಳ ಹಿಂದೆ ನೊರನಕ್ಕಿ ಗ್ರಾಮದ ಅಯ್ಯಪ್ಪ ಹಾಗೂ ನಯನಾ ಮದುವೆಯಾಗಿದ್ದರು. ಮದುವೆಯಾದ ಒಂದು ವರ್ಷದವರೆಗೆ ಗಂಡ-ಹೆಂಡತಿ ಚೆನ್ನಾಗಿಯೇ ಇದ್ದರು. ಆದರೆ ದಿನ ಕಳೆದಂತೆ ತವರು ಮನೆಯಿಂದ ವರದಕ್ಷಿಣೆ ತರುವಂತೆ ಹಿಂಸೆ ಆರಂಭಿಸಿದ್ದ. ಈ ಹಿನ್ನೆಲೆಯಲ್ಲಿ ಹಲವಾರು ಬಾರಿ ರಾಜಿ ಪಂಚಾಯ್ತಿ ನಡೆಸಲಾಗಿತ್ತು. ಈ ನಡುವೆ ನಯನ ಗರ್ಭಿಣಿಯಾಗಿದ್ದರಿಂದ ಒಂದು ತಿಂಗಳಿನಿಂದ ತವರು ಮನೆಯಲ್ಲೇ ಉಳಿದುಕೊಂಡಿದ್ದಳು.
ನ.17 ರ ರಾತ್ರಿ ಅಯ್ಯಪ್ಪ, ಮಾವನ ಮನೆಗೆ ಬಂದು ಅಲ್ಲಿಯೇ ಉಳಿದುಕೊಂಡಿದ್ದ. ಮರುದಿನ ಬೆಳಿಗ್ಗೆ ನಯನಾಳನ್ನು ಮಲ್ಲಪ್ಪನ ಬೆಟ್ಟಕ್ಕೆ ಕರೆದುಕೊಂಡು ಹೋಗಿದ್ದ. ಅಂದಿನಿಂದ ನಯನ ತವರು ಮನೆಯವರ ಫೋನ್ ರಿಸೀವ್ ಮಾಡಿರಲಿಲ್ಲ. ಆದರೆ ಅಯ್ಯಪ್ಪ ಸಂಬಂಧಿ ಶೃತಿ ಎಂಬುವವರು ನಯನಾಳ ತಾಯಿಗೆ ಕರೆ ಮಾಡಿ, ನಿಮ್ಮ ಮಗಳಿಗೆ ಆರೋಗ್ಯ ಸರಿ ಇಲ್ಲ ಎಂದು ತಿಳಿಸಿದ್ದಾರೆ.
ವಿಚಾರ ತಿಳಿದ ನಯನ ತಾಯಿ ಕರೆ ಮಾಡಿದಾಗ, ಅಯ್ಯಪ್ಪ ಕರೆ ಸ್ವೀಕರಿಸಿ, ನಿಮ್ಮ ಮಗಳನ್ನು ನಾನೇ ಕೊಲೆ ಮಾಡಿದ್ದೇನೆ ಎಂದು ಕರೆ ಕಟ್ ಮಾಡಿದ್ದಾನೆ. ಅದಾದ ಬಳಿಕ ಅಯ್ಯಪ್ಪ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಗೆ ಸಂಬಂಧಿಸಿ ನಯನಾ ಎರಡು ಬಾರಿ ಪೊಲೀಸ್ ಠಾಣೆಗೂ ದೂರು ನೀಡಿದ್ದಳು. ಆದರೂ ಯಾವುದೇ ಕ್ರಮ ಆಗಿರಲಿಲ್ಲ ಎಂದು ನಯನಾ ಪೋಷಕರು ಆರೋಪಿಸಿದ್ದಾರೆ. ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.