newsics.com
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ಇತ್ತೀಚೆಗೆ ಕ್ರೈಂ ಸಿಟಿ ಆಗಿ ಬದಲಾಗುತ್ತಿದೆ. ಈ ಮಾತಿಗೆ ಪೂರಕ ಎಂಬಂತೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ದೊಡ್ಡ ಪ್ರಮಾಣದ ಅಕ್ರಮ ಪ್ರಾಣಿ ಸಾಗಾಣಿಕೆ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ.
ಹೌದು, ಮಲೇಷ್ಯಾದಿಂದ ಟ್ರಾಲಿ ಬ್ಯಾಗ್‌ಗಳಲ್ಲಿ ಹೊತ್ತು ತಂದಿದ್ದ 40 ಅಪರೂಪದ ವನ್ಯಜೀವಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ರಕ್ಷಿಸಿದ್ದಾರೆ. ಕೌಲಾಲಂಪುರದಿಂದ ಬಂದ ವಿಮಾನದಲ್ಲಿ 40 ಪೆಟ್ಟಿಗೆಗಳಲ್ಲಿ ವಿವಿಧ ಜಾತಿಯ ಆಮೆಗಳು, ಹಲ್ಲಿಗಳು ಮತ್ತು ಇಲಿಗಳನ್ನು ಅಡಗಿಸಿಟ್ಟು ತರಲಾಗುತ್ತಿತ್ತು. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಅಕ್ರಮ ಪ್ರಾಣಿ ಸಾಗಾಟ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಅಲ್ಡಾಬ್ರಾ ದೊಡ್ಡ ಆಮೆಗಳು, ಕೆಂಪು ಪಾದದ ಆಮೆಗಳು, ದೇಹದ ಮೇಲೆ ಮಣಿಗಳಿರುವ ಹಲ್ಲಿಗಳು, ಖಡ್ಗಮೃಗ ಮರಿಗಳು, ಅಪರೂಪದ ಅಲ್ಬಿನೋ ಬಾವಲಿ, ಶಿಂಗಲ್ ಬ್ಯಾಕ್ ಸ್ಕಿಂಕ್ ಪ್ರಾಣಿಗಳು, ಮೊಸಳೆ ಮರಿಗಳು, ಮರಿ ಚುಕ್ಕೆ ಆಮೆಗಳು, ಗಿಬ್ಬಾನ್ ಸೇರಿದಂತೆ ವಿದೇಶಿ ಪ್ರಾಣಿಗಳನ್ನು ಬಂಧಿತರಿಂದ ರಕ್ಷಿಸಲಾಗಿದೆ. ಆರೋಪಿತರು ಎರಡು ಟ್ರಾಲಿ ಬ್ಯಾಗ್‌ಗಳಲ್ಲಿ ಪ್ರಾಣಿಗಳನ್ನು ಸಾಗಿಸುತ್ತಿದ್ದು ಒಂದು ಬ್ಯಾಗ್‌ನಲ್ಲಿ 24 ಪ್ರಾಣಿಗಳು ಹಾಗೂ ಮೊತ್ತೊಂದರಲ್ಲಿ 16 ಪ್ರಾಣಿಗಳನ್ನು ಸಾಗಿಸಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.