newsics.com
ನ್ಯೂಸಿಕ್ಸ್.ಕಾಮ್
ಶುಭ ದಿನ
04-09-2024 ಬುಧವಾರ
***
ಈ ದಿನದ ಸುಭಾಷಿತ
ಉಪರ್ಯುಪರಿ ಲೋಕಸ್ಯ
ಸರ್ವೋ ಭವಿತುಮಿಚ್ಛತಿ |
ಯತತೇ ಚ ಯಥಾಶಕ್ತಿ
ನ ಚ ತದ್ವರ್ತತೇ ತಥಾ ||
(ನಾರದ ಪುರಾಣ)
ತಾವು ಲೋಕದ ನಿರ್ಬಂಧಗಳನ್ನೂ, ಮಿತಿಗಳನ್ನೂ ಮೀರಬೇಕೆಂದು ಎಲ್ಲರೂ ಮೇಲುಮೇಲೇರಲು ತವಕಿಸುತ್ತಾರೆ. ತಮ್ಮ ಶಕ್ತ್ಯನುಸಾರ ಪ್ರಯತ್ನ ಮಾಡುತ್ತಾರೆ. ಆದರೆ ಅದು ಸಾಧ್ಯವಾಗುವುದಿಲ್ಲ!.
ಎಲ್ಲ ಮಾನುಷ ಪ್ರಯತ್ನಗಳೂ ಸಹಜವಾದ ಗಡಿಗಳಿಗೆ ಒಳಪಟ್ಟವೇ. ಈ ಸ್ಥಿರ ಸತ್ಯದ ಅರಿವಿದ್ದರೂ ತಾವು ಸ್ವಚ್ಛಂದವಾಗಿ ಇರಬಲ್ಲೆವೆಂದು ಭ್ರಮಿಸುವುದು ಒಂದು ವಿಚಿತ್ರವಾದ ದೌರ್ಬಲ್ಯ. ಇಂಥ ಚಾಪಲ್ಯಕ್ಕೆ ಪೋಷಣೆ ದೊರೆಯುವುದು ಅಹಂಕಾರಾತಿಶಯದಿಂದ. ಅಹಂಕಾರವನ್ನು ಬೆಳೆಯಗೊಡದೆ ನಮ್ರರಾಗಿರುವುದು ಹಿತಸಾಧಕ.
***
ಈ ದಿನದ ಮಾತು
ತಪ್ಪುಗಳನ್ನು ಮಾಡುವುದು ಮತ್ತು ಕಲಿಯುವುದೇ ಅನುಭವ.
– ಬಿಲ್ ಆಕ್ಮನ್
***
ಈ ದಿನದ ಇತಿಹಾಸ
* ದಾದಾ ಭಾಯಿ ನವರೋಜಿ – ಸೆಪ್ಟೆಂಬರ್ 04, 1825 ರಂದು ಜನಿಸಿದರು. ಬ್ರಿಟಿಷ್ ಪಾರ್ಸಿ ವಿದ್ವಾಂಸ, ವ್ಯಾಪಾರಿ ಮತ್ತು ರಾಜಕಾರಣಿಯಾಗಿದ್ದು, ಅವರು 1892 ಮತ್ತು 1895 ರ ನಡುವೆ ಯುನೈಟೆಡ್ ಕಿಂಗ್‌ಡಮ್ ಹೌಸ್ ಆಫ್ ಕಾಮನ್ಸ್‌ನಲ್ಲಿ, ಲಿಬರಲ್ ಪಕ್ಷದ ಸಂಸತ್ ಸದಸ್ಯರಾಗಿದ್ದರು (ಸಂಸದ) ಮತ್ತು ಬ್ರಿಟಿಷ್ ಸಂಸದರಾದ ಮೊದಲ ಭಾರತೀಯ. ನೌರೋಜಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಕ ಸದಸ್ಯರಲ್ಲಿ ಒಬ್ಬರು. 2014 ರಲ್ಲಿ, ಯೂಕೆ – ಭಾರತ ಸಂಬಂಧಗಳ ಸೇವೆಗಳಿಗಾಗಿ ಉಪ – ಪ್ರಧಾನಿ ನಿಕ್ ಕ್ಲೆಗ್ ದಾದಾಭಾಯ್ ನೌರೋಜಿ ಪ್ರಶಸ್ತಿಗಳನ್ನು ಉದ್ಘಾಟಿಸಿದರು. 1963, 1997 ಮತ್ತು 2017 ರಲ್ಲಿ ನೌರೋಜಿ ಹೆಸರಲ್ಲಿ ಇಂಡಿಯಾ ಪೋಸ್ಟ್ ಅಂಚೆಚೀಟಿಗಳನ್ನು ಮೀಸಲಿಟ್ಟಿದೆ. “ಗ್ರ್ಯಾಂಡ್ ಓಲ್ಡ್ ಮ್ಯಾನ್ ಆಫ್ ಇಂಡಿಯಾ” ಮತ್ತು “ಭಾರತದ ಅನಧಿಕೃತ ರಾಯಭಾರಿ” ಎಂದೂ ಕರೆಯಲ್ಪಡುವ ಸರ್ ದಾದಾಭಾಯ್ ನೌರೋಜಿ ದೋರ್ಡಿ ಅವರು 30 ಜೂನ್ 1917 ರಂದು ತಮ್ಮ 91ನೇ ವಯಸ್ಸಿನಲ್ಲಿ ನಿಧನರಾದರು.
* ಸೆಪ್ಟೆಂಬರ್ 04, 1962 ರಂದು ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಹಾಗೂ ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಕಿರಣ್ ಮೋರೆ ಗುಜರಾತಿನ ಬರೋಡದಲ್ಲಿ ಜನಿಸಿದರು.
* ಸೆಪ್ಟೆಂಬರ್ 04, 1972 ರಂದು ಅಮೆರಿಕದ ಈಜುಗಾರ ಮಾರ್ಕ್ ಸ್ಪಿಟ್ಜ್ ಅವರು ಮ್ಯೂನಿಕ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 400 ಮೀಟರುಗಳ ಮೆಡ್ಲೆ ರಿಲೇಯಲ್ಲಿ ಏಳನೇ ಚಿನ್ನದ ಪದಕ ಗೆದ್ದುಕೊಂಡರು. ಇದರೊಂದಿಗೆ ಒಂದೇ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಏಳು ಚಿನ್ನದ ಪದಕಗಳನ್ನು ಹೆಗಲಿಗೆ ಏರಿಸಿಕೊಂಡ ಪ್ರಪ್ರಥಮ ಈಜುಗಾರ ಎಂಬ ಖ್ಯಾತಿ ಇವರದಾಯಿತು.
* ಸ್ಟೀವ್ ಇರ್ವಿನ್ – ಆಸ್ಟೇಲಿಯಾದ ಪ್ರಸಿದ್ಧ ವನ್ಯಜೀವಿ ಸಂರಕ್ಷಕ ಹಾಗು ವನ್ಯಜೀವಿ ಚಲನಚಿತ್ರಕಾರರು. ಡಿಸ್ಕವರಿ ಚಾನೆಲ್ ಹಾಗು ಅನಿಮಲ್ ಪ್ಲ್ಯಾನೆಟ್ ಗಳಲ್ಲಿ ಇವರ ಪ್ರಸಿದ್ಧ ಟೀ.ವಿ ಕಾರ್ಯಕ್ರಮ ಕ್ರೊಕೊಡೈಲ್ ಹಂಟರ್ ಪ್ರಸಾರವಾಗುತಿತ್ತು. ಇದರಿಂದಾಗಿ ಇವರು ಸ್ವತ: ಕ್ರೊಕೊಡೈಲ್ ಹಂಟರ್ ಎಂದೇ ಚಿರಪರಿಚಿತರಾಗಿದ್ದರು. ನಿರ್ಭೀತಿಯಿಂದ, ಮೊಸಳೆಗಳೊಂದಿಗೆ ಇವರು ನಡೆಸಿಕೊಡುತ್ತಿದ್ದ ಟೀವಿ ಕಾರ್ಯಕ್ರಮ ಎಲ್ಲರಿಗೂ ಮೆಚ್ಚುಗೆಯಾಗಿತ್ತು. ವನ್ಯಜೀವಿಗಳು, ಅದರಲ್ಲೂ ಹಾವು ಹಾಗು ಮೊಸಳೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಅವುಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸೆಪ್ಟೆಂಬರ್ 04, 2006 ರಂದು ಇರ್ವಿನ್ ಅವರು ಸ್ಟಿಂಗ್‌ರೇಗಳ ಬಗ್ಗೆ ಸಮುದ್ರದಾಳದಲ್ಲಿ ಹೊಸ ಡೊಕ್ಯುಮೆಂಟರಿ ತಯಾರಿಸುವಾಗ ಸ್ಟಿಂಗ್‌ರೇನ ಬಾರ್ಬಿನ ಇರಿತದಿಂದ ಸಾವಿಗೀಡಾದರು.
* ಸೆಪ್ಟೆಂಬರ್ 04, 2015 ರಂದು ಗೋವಾದ 7ನೇ ಮುಖ್ಯಮಂತ್ರಿಯಾಗಿದ್ದ ವಿಲ್ಫ್ರೆಡ್ ಡಿಸೋಜ ನಿಧನರಾದರು.