newsics.com | ನ್ಯೂಸಿಕ್ಸ್
ಮಂಗಳೂರು: ಈ ಬಾರಿ ಅತಿ ಹೆಚ್ಚು ಮಳೆ ರಜೆ ಘೋಷಿಸಿದ ದಕ್ಷಿಣ ಕನ್ನಡ ಜಿಲ್ಲಾಡಳಿದ ಕ್ರಮಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಭಾರತೀಯ ಹವಾಮಾನ ಇಲಾಖೆ ನೀಡಿದ ಮಳೆ ಮುನ್ಸೂಚನೆ ಹಲವು ಬಾರಿ ವಾಸ್ತವ ಸ್ಥಿತಿಗೆ ಹೊಂದಿಕೆಯಾಗದ ಹಿನ್ನೆಲೆಯಲ್ಲಿ ಅಗತ್ಯವಿಲ್ಲದ ರಜೆಗಳಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಧಕ್ಕೆ ಉಂಟಾಗಿದೆ ಎಂಬ ಆಕ್ಷೇಪಗಳು ಕೇಳಿಬಂದಿವೆ.
ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಬದಲಿಗೆ ತಾಲೂಕುವಾರು ಮಳೆ ರಜೆ ಘೋಷಿಸುವ ಕುರಿತು ಜಿಲ್ಲಾಡಳಿತ ಗಂಭೀರ ಚಿಂತನೆ ನಡೆಸಿದೆ.
ಏಕೆ ಬದಲಾವಣೆ?
ಈ ಬಾರಿ ಜಿಲ್ಲೆಯಲ್ಲಿ ಘೋಷಿಸಲಾದ ಏಳು ಮಳೆ ರಜೆಗಳಲ್ಲೂ ಎಲ್ಲ ತಾಲೂಕುಗಳಲ್ಲೂ ಒಂದೇ ರೀತಿಯ ಪರಿಸ್ಥಿತಿ ಇರಲಿಲ್ಲ. ಕೆಲವು ಭಾಗಗಳಲ್ಲಿ ಭಾರೀ ಮಳೆಯಿದ್ದರೆ, ಹಲವು ಕಡೆ ಸಾಮಾನ್ಯ ಮಳೆಯಷ್ಟೇ ದಾಖಲಾಗಿತ್ತು. ಆದರೂ ಇಡೀ ಜಿಲ್ಲೆಗೆ ರಜೆ ಘೋಷಿಸಿದ್ದರಿಂದ ಅನಗತ್ಯವಾಗಿ ಶಿಕ್ಷಣಕ್ಕೆ ಅಡ್ಡಿಯಾಯಿತು ಎಂಬ ಟೀಕೆ ಶೈಕ್ಷಣಿಕ ಸಂಸ್ಥೆಗಳ ಜತೆಗೆ ಶಿಕ್ಷಣ ತಜ್ಞರಿಂದ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ತಹಸೀಲ್ದಾರ್, ಬಿಇಒ ಸೇರಿದಂತೆ ಸ್ಥಳೀಯ ಅಧಿಕಾರಿಗಳ ವರದಿ ಆಧರಿಸಿ, ಯಾವ ತಾಲೂಕಿನಲ್ಲಿ ಅಪಾಯದ ಪರಿಸ್ಥಿತಿ ಇದೆಯೋ ಅಲ್ಲಿ ಮಾತ್ರ ರಜೆ ಘೋಷಿಸುವ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಚರ್ಚೆ ನಡೆದಿದೆ.
ಜಿಲ್ಲಾಧಿಕಾರಿ ಹೇಳಿದ್ದೇನು?
ಐಎಂಡಿ ಮುನ್ಸೂಚನೆ ನೀಡಿದಾಗ ಮಕ್ಕಳ ಸುರಕ್ಷತೆಯೇ ಮೊದಲ ಆದ್ಯತೆ. ಶಿಕ್ಷಣ ಎಷ್ಟು ಮುಖ್ಯವೋ, ಮಕ್ಕಳ ಜೀವವೂ ಅಷ್ಟೇ ಅಮೂಲ್ಯ. ಆದರೆ ಮುಂದಿನ ದಿನಗಳಲ್ಲಿ ತಾಲೂಕುವಾರು ರಜೆ ಘೋಷಿಸುವ ವ್ಯವಸ್ಥೆ ಜಾರಿಗೆ ತರುವ ಉದ್ದೇಶವಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ.
ನೋಟಿಸ್‌ಗೆ ಕ್ಷಮಾಪಣಾ ಪತ್ರ:
ಈ ಮಧ್ಯೆ, ಮಳೆ ರಜೆ ಘೋಷಿಸಿದ್ದರೂ ನಿಯಮ ಉಲ್ಲಂಘಿಸಿ ತರಗತಿ ನಡೆಸಿದ 10 ಶಾಲೆ- ಕಾಲೇಜುಗಳಿಗೆ ಜಿಲ್ಲಾಡಳಿತ ನೋಟಿಸ್ ನೀಡಿತ್ತು. ಇದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಂಸ್ಥೆಗಳು ಕ್ಷಮಾಪಣಾ ಪತ್ರ ಸಲ್ಲಿಸಿ, ಇನ್ನು ಮುಂದೆ ನಿಯಮ ಪಾಲಿಸುವುದಾಗಿ ಲಿಖಿತ ಭರವಸೆ ನೀಡಿವೆ.
ಇದೇ ವೇಳೆ, ಕಳೆದ ಮೂರು ದಿನಗಳಲ್ಲೂ ಕೆಲ ಶಾಲೆ ಹಾಗೂ ಪಿಯು ಕಾಲೇಜುಗಳು ತರಗತಿ ನಡೆಸಿರುವ ಕುರಿತು ದೂರುಗಳು ಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಕೆಲವು ಕಡೆ ಅಧಿಕಾರಿಗಳು ಸ್ಥಳಕ್ಕೇ ತೆರಳಿ ತರಗತಿಗಳನ್ನು ಸ್ಥಗಿತಗೊಳಿಸಿರುವುದಾಗಿ ಮೂಲಗಳು ತಿಳಿಸಿವೆ.
ಶೈಕ್ಷಣಿಕ ಸಂಸ್ಥೆಗಳ ವಿರೋಧ ಏನು?
ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣ ಹಬ್ ಆಗಿದ್ದು, ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪದೇಪದೇ ಮಳೆ ರಜೆ ಘೋಷಿಸುವುದರಿಂದ ಪಠ್ಯಕ್ರಮ ಹಿಂದುಳಿಯುತ್ತಿದೆ, ಪರೀಕ್ಷಾ ವೇಳಾಪಟ್ಟಿಗೆ ಅಡ್ಡಿಯಾಗುತ್ತಿದೆ, ವಸತಿ ಶಾಲೆಗಳ ವಿದ್ಯಾರ್ಥಿಗಳು ದಿನಗಟ್ಟಲೆ ಹಾಸ್ಟೆಲ್‌ಗಳಲ್ಲೇ ಉಳಿಯಬೇಕಾಗುತ್ತಿದೆ, ಹೊರ ಜಿಲ್ಲೆಗಳ ವಿದ್ಯಾರ್ಥಿಗಳು ಮತ್ತು ಪೋಷಕರಿಗೂ ಅನಾನುಕೂಲವಾಗುತ್ತಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.
PM Modi to visit Mysore ಆಗಸ್ಟ್ 1ರಂದು ಮೈಸೂರಿಗೆ ಬರಲಿದ್ದಾರೆ ಪ್ರಧಾನಿ ಮೋದಿ
Dipke Viral post ಇದಿನ್ನೂ ಆರಂಭವಷ್ಟೇ, ಸಾಗಬೇಕಾದ ಹಾದಿ ಬಹುದೂರವಿದೆ: ಅಭಿಜಿತ್ ದೀಪ್ಕೆ ವಿಡಿಯೊ ಪೋಸ್ಟ್ ವೈರಲ್
BUCK MOON ಅಪರೂಪದ ಖಗೋಳ ವಿಸ್ಮಯ: ಜುಲೈ 29ಕ್ಕೆ ಆಕರ್ಷಕ ‘ಬಕ್ ಮೂನ್’ ಪ್ರತ್ಯಕ್ಷ!