newsics.com | ನ್ಯೂಸಿಕ್ಸ್
ನವದೆಹಲಿ: ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಹಾಗೂ ಪ್ರತಿಭಟನಾಕಾರರ ಮೇಲಿನ ಕ್ರಮಗಳನ್ನು ವಿರೋಧಿಸಿ ಹವಾಮಾನ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ನಡೆಸಿದ್ದ 26 ದಿನಗಳ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವು ಕೊನೆಗೊಂಡಿದೆ. ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರ ಸಮ್ಮುಖದಲ್ಲಿ ಜ್ಯೂಸ್ ಕುಡಿಯುವ ಮೂಲಕ ಅವರು ತಮ್ಮ ಸುದೀರ್ಘ ಉಪವಾಸವನ್ನು ಅಧಿಕೃತವಾಗಿ ಅಂತ್ಯಗೊಳಿಸಿದ್ದಾರೆ.
ಸಾಮಾನ್ಯವಾಗಿ ಇದು ಬಿಜೆಪಿ ಅಥವಾ ಸರ್ಕಾರದ ನಾಯಕರ ಪ್ರಯತ್ನದಿಂದ ಮಾತ್ರ ಕೊನೆಗೊಂಡಿದೆ ಎಂದು ಬಿಂಬಿತವಾಗಿದ್ದರೂ, ಇದರ ಹಿಂದೆ ಕಾಂಗ್ರೆಸ್ ಸಂಸದ ಹಾಗೂ ಹಿರಿಯ ವಕೀಲ ವಿವೇಕ್ ತಂಖಾ ಅವರ ಪಾತ್ರ ದೊಡ್ಡದಿದೆ. ಈ ಹಿಂದೆ ವಾಂಗ್ಚುಕ್ ಅವರ ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಪ್ರಕರಣದಲ್ಲಿಯೂ ಕಾನೂನು ಪ್ರತಿನಿಧಿಯಾಗಿದ್ದ ತಂಖಾ, ಈ ಬಾರಿ ಬಿಕ್ಕಟ್ಟು ನಿವಾರಣೆಯಲ್ಲಿ ಪ್ರಮುಖ ಕೊಂಡಿಯಾದರು. ಇವರೊಂದಿಗಿನ ಮಾತುಕತೆಯ ಬಳಿಕವೇ ವಾಂಗ್ಚುಕ್ ಅವರು ಜೆ.ಪಿ. ನಡ್ಡಾ ಅವರಿಗೆ ಮುಕ್ತ ಪತ್ರ ಬರೆದು ತಮ್ಮ ಬೇಡಿಕೆಗಳ ಕುರಿತು ಸ್ಪಷ್ಟನೆ ಕೋರಿದ್ದರು.
ಜುಲೈ 20ರಂದು ಸಂಸತ್ ಮೆರವಣಿಗೆಯ ವೇಳೆ ನಡೆದ ಹಿಂಸಾಚಾರದ ಬಳಿಕ ಸರ್ಕಾರ ಹಾಗೂ ವಾಂಗ್ಚುಕ್ ನಡುವೆ ಮೂರು ದಿನಗಳ ಕಾಲ ತೀವ್ರ ಮಾತುಕತೆ ನಡೆಯಿತು. ವಾಂಗ್ಚುಕ್ ಅವರ ಆರೋಗ್ಯ ತೀವ್ರವಾಗಿ ಕ್ಷೀಣಿಸಿ ಸುಮಾರು 11 ಕೆಜಿ ತೂಕ ಕಳೆದುಕೊಂಡಿರುವುದು ಎಲ್ಲರ ಆತಂಕಕ್ಕೆ ಕಾರಣವಾಗಿತ್ತು. ಚಳವಳಿಯಲ್ಲಿ ಭಾಗವಹಿಸಿದ ಯುವಕರ ಮೇಲೆ ಯಾವುದೇ ಕಾನೂನು ಕ್ರಮ ಜರುಗಿಸುವುದಿಲ್ಲ ಎಂಬ ಸ್ಪಷ್ಟ ಲಿಖಿತ ಭರವಸೆ ನೀಡಬೇಕು ಎಂದು ವಾಂಗ್ಚುಕ್ ಕರಾರು ಹಾಕಿದ್ದರು.
ಜುಲೈ 21ರಂದು ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಹಾಗೂ ಜಿತೇಂದ್ರ ಸಿಂಗ್ ಅವರು ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು. ಮರುದಿನ ವಿವೇಕ್ ತಂಖಾ ನೇತೃತ್ವದಲ್ಲಿ ಶಶಿ ತರೂರ್, ಕಪಿಲ್ ಸಿಬಲ್, ರಾಮ್‌ಗೋಪಾಲ್ ಯಾದವ್ ಸೇರಿದಂತೆ ವಿವಿಧ ಪಕ್ಷಗಳ ಸಂಸದರ ನಿಯೋಗವು ವಾಂಗ್ಚುಕ್ ಅವರನ್ನು ಭೇಟಿಯಾಗಿ ಬೆಂಬಲ ಸೂಚಿಸಿತು.
ಉಪವಾಸ ಹಿಂಪಡೆಯುವ ಅಂತಿಮ ಹಂತದಲ್ಲಿ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೋ ಪ್ರಮುಖ ಪಾತ್ರ ವಹಿಸಿದರು. ಸರ್ಕಾರದ ಲಿಖಿತ ಭರವಸೆಗಳ ಮೇಲೆ ವಿಶ್ವಾಸವಿಟ್ಟು ಉಪವಾಸ ಮುರಿಯುವಂತೆ ಅವರು ಪತಿಗೆ ಮನವರಿಕೆ ಮಾಡಿಕೊಟ್ಟರು. ಅದೇ ರಾತ್ರಿ ನಡ್ಡಾ ಮತ್ತು ಜಿತೇಂದ್ರ ಸಿಂಗ್ ಆಸ್ಪತ್ರೆಗೆ ಮರುಭೇಟಿ ನೀಡಿ, ಜಂತರ್ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದವರ ಮೇಲಿನ ಪ್ರಕರಣಗಳನ್ನು ಕೈಬಿಡುವುದಾಗಿ ಮತ್ತು ನೀಟ್ ಅಕ್ರಮದಿಂದ ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ಆಸ್ಪತ್ರೆಯಿಂದ ಸಂಪೂರ್ಣ ಚೇತರಿಸಿಕೊಂಡ ಬಳಿಕ ವಾಂಗ್ಚುಕ್ ಅವರು ಜಂತರ್ ಮಂತರ್‌ನ ಯುವ ಪ್ರತಿಭಟನಾಕಾರರನ್ನು ಭೇಟಿಯಾಗಿ ಲಡಾಖ್‌ಗೆ ಮರಳಲಿದ್ದಾರೆ. ಈ ಮೂಲಕ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಡೆದ ಈ ಹೋರಾಟ ಸುಖಾಂತ್ಯ ಕಂಡಿದೆ.
Neet Protest Violence ನೀಟ್ ಪ್ರತಿಭಟನೆಯಲ್ಲಿ 2,500ಕ್ಕೂ ಹೆಚ್ಚು ಅಪರಾಧಿಗಳು!