newsics.com | ನ್ಯೂಸಿಕ್ಸ್
ಮೈಸೂರು: ರಾಮಾಯಣದ ರಾವಣನಿಗೂ ಹಳೇ ಮೈಸೂರಿಗೂ ಏನೋ ಸಂಬಂಧವಿರಬೇಕು. ಯಾಕೆಂದರೆ ಒಂದಲ್ಲ, ಎರಡಲ್ಲ ಬರೋಬ್ಬರಿ 35ಕ್ಕೂ ಹೆಚ್ಚು ರಾವಣನ ವಿಗ್ರಹಗಳು ಪತ್ತೆಯಾಗಿವೆ.
ಮೈಸೂರು ಹಾಗೂ ಮಂಡ್ಯ ಜಿಲ್ಲೆಯ ಕೆಲವು ಪ್ರದೇಶದಲ್ಲಿ ನಡೆದ ಪುರಾತತ್ತ್ವ ಉತ್ಪನನ ಹಾಗೂ ಸಂಶೋಧನಾ ಕಾರ್ಯದ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ರಾವಣನ ವಿಗ್ರಹಗಳು ಪತ್ತೆಯಾಗಿರುವುದು ತೀವ್ರ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.
ಮಂಡ್ಯ ಜಿಲ್ಲೆಯ ಮದ್ದೂರು, ಮಳವಳ್ಳಿ ಹಾಗೂ ಮಂಡ್ಯ ತಾಲೂಕು ಸೇರಿದಂತೆ ಮೈಸೂರಿನ ಬನ್ನೂರು ಮತ್ತು ಟಿ. ನರಸೀಪುರ ವ್ಯಾಪ್ತಿಯಲ್ಲಿ ಈ ಅಪರೂಪದ ಮೂರ್ತಿಗಳು ದೊರೆತಿವೆ.
ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ರಾವಣನ ಮೂರ್ತಿಗಳು ದೊರೆತಿರುವುದು ಪುರಾತತ್ವ ತಜ್ಞರ ಮತ್ತು ಇತಿಹಾಸ ತಜ್ಞರ ಆಸಕ್ತಿ ಹೆಚ್ಚಿಸಿದೆ.
ಭಾರತೀಯ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆ ನಡೆಸಿದ ಉತ್ಪನನದಲ್ಲಿ ಸುಮಾರು 15ರಿಂದ 20 ವಿಗ್ರಹಗಳು ಪತ್ತೆಯಾಗಿವೆ. ಇದರೊಂದಿಗೆ, ಹಿರಿಯ ಪುರಾತತ್ವ ತಜ್ಞ ಪ್ರೊ.ಎನ್.ಎಸ್. ರಂಗರಾಜು ಅವರ ಪ್ರತ್ಯೇಕ ಸಂಶೋಧನೆಯಲ್ಲೂ ಅಷ್ಟೇ ಪ್ರಮಾಣದ ರಾವಣನ ವಿಗ್ರಹಗಳು ಸಿಕ್ಕಿರುವುದು ಈ ಶೋಧಕ್ಕೆ ಮತ್ತಷ್ಟು ಮಹತ್ವ ತಂದಿದೆ.
ಮಂಡ್ಯ ಮತ್ತು ಮೈಸೂರು ಭಾಗದ ಮುತ್ತತ್ತಿ ಪ್ರದೇಶಕ್ಕೆ ರಾಮಾಯಣದ ನಂಟಿದ್ದರೆ, ಪಾಂಡವಪುರ ಮತ್ತು ಕುಂತಿಬೆಟ್ಟಕ್ಕೆ ಮಹಾಭಾರತದ ಹಿನ್ನೆಲೆಯಿದೆ. ಇದನ್ನು ಇಂದಿಗೂ ಜನರು ನಂಬುತ್ತಾರೆ. ರಾಮ-ರಾವಣರ ಸಂಚಾರ ಹಳೇ ಮೈಸೂರು ಭಾಗದಲ್ಲಿ ನಡೆದಿರುವ ಸಾಧ್ಯತೆಗಳನ್ನು ಇಲ್ಲಿನ ಪುರಾಣಗಳು ಹೇಳುತ್ತಿವೆ.
ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ರಾವಣನ ಮೂರ್ತಿಗಳು ಪೂಜಿಸಲ್ಪಡುವುದು ಅತ್ಯಂತ ವಿರಳ. ಆದರೆ ಈ ಭಾಗದಲ್ಲಿ ಇಷ್ಟೊಂದು ಸಂಖ್ಯೆಯ ರಾವಣನ ವಿಗ್ರಹಗಳು ಸಿಕ್ಕಿರುವುದು ಇತಿಹಾಸದ ಹೊಸ ಮಜಲನ್ನು ತೆರೆದಿಟ್ಟಿದೆ.
ಈ ಶೋಧನೆಯು ಪ್ರಾಚೀನ ಸಂಪ್ರದಾಯ ಹಾಗೂ ಸ್ಥಳೀಯ ಸಂಸ್ಕೃತಿಯ ಕುರಿತು ಹೆಚ್ಚಿನ ಅಧ್ಯಯನಕ್ಕೆ ದಾರಿ ಮಾಡಿಕೊಟ್ಟಿದೆ. ಈ ಕುರಿತು ಹೆಚ್ಚಿನ ಸಂಶೋಧನೆಗಳಿಂದ ಮಾತ್ರ ಇನ್ನಷ್ಟು ವಿಷಯಗಳು ಹೊರಬರುವ ಸಾಧ್ಯತೆಗಳಿವೆ.
UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ