newsics.com | ನ್ಯೂಸಿಕ್ಸ್
ರೋಹ್ಟಕ್ (ಹರಿಯಾಣ): ಕೇವಲ 5 ರೂಪಾಯಿಯ ಪಾನಿಪುರಿ ವಿಚಾರವಾಗಿ ಆರಂಭವಾದ ಸಣ್ಣ ತಕರಾರು, ಬರೋಬ್ಬರಿ 12 ವರ್ಷಗಳ ಸುದೀರ್ಘ ಕಾನೂನು ಸಮರದ ನಂತರ ಮುಕ್ತಾಯಗೊಂಡಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪ್ರಕರಣದ ಎಲ್ಲಾ 9 ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯವು ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನೆಲೆ:
2013ರ ಮೇ ತಿಂಗಳಲ್ಲಿ ಹರಿಯಾಣದ ಮಹಂ ಪಟ್ಟಣದ ರಾಜೀವ್ ಚೌಕ್‌ನಲ್ಲಿ ಈ ಘಟನೆ ನಡೆದಿತ್ತು. ಅನಿಲ್ ಎಂಬ ಗ್ರಾಹಕ ಹಾಗೂ ಸುಬೇ ಸಿಂಗ್ ಎಂಬ ಪಾನಿಪುರಿ ವ್ಯಾಪಾರಿಯ ನಡುವೆ ‘5 ರೂಪಾಯಿಗೆ ಎಷ್ಟು ಪಾನಿಪುರಿ ನೀಡಬೇಕು’ ಎಂಬ ಸಣ್ಣ ವಿಷಯಕ್ಕೆ ಗಲಾಟೆ ಆರಂಭವಾಗಿತ್ತು. ಈ ಜಗಳ ವಿಕೋಪಕ್ಕೆ ತಿರುಗಿ, ಇರಡೂ ಕಡೆಯ ಗುಂಪುಗಳು ಪರಸ್ಪರ ಹಲ್ಲೆ ನಡೆಸಿಕೊಂಡಿದ್ದವು. ತದನಂತರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಒಟ್ಟು 9 ಜನರ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ನ್ಯಾಯಾಲಯದ ಆದೇಶ:
ಕಳೆದ 12 ವರ್ಷಗಳಿಂದ ಸ್ಥಳೀಯ ಸಿವಿಲ್ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಇತ್ತೀಚಿನ ಅಂತಿಮ ವಿಚಾರಣೆಯ ವೇಳೆ, ಉಭಯ ಕಡೆಯವರು ಪರಸ್ಪರ ಹಲ್ಲೆ ಮಾಡಿರುವುದಕ್ಕೆ ಯಾವುದೇ ಗಟ್ಟಿಯಾದ ವೈದ್ಯಕೀಯ ದಾಖಲೆಗಳಾಗಲಿ ಅಥವಾ ಸ್ವತಂತ್ರ ಸಾಕ್ಷಿಗಳಾಗಲಿ ಇಲ್ಲದೇ ಇರುವುದನ್ನು ನ್ಯಾಯಾಧೀಶರು ಗಮನಿಸಿದರು. ಈ ಹಿನ್ನೆಲೆಯಲ್ಲಿ, ಆರೋಪಿಗಳ ಮೇಲಿನ ಅಪರಾಧ ಸಾಬೀತಾಗದ ಕಾರಣ ಪ್ರಕರಣವನ್ನು ವಜಾಗೊಳಿಸಲಾಗಿದೆ.
ಕೇವಲ ₹5 ರ ಜಗಳಕ್ಕೆ ಎರಡು ಕಡೆಯವರು ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಕೋರ್ಟ್ ಮತ್ತು ವಕೀಲರಿಗಾಗಿ ಸಾವಿರಾರು ರೂಪಾಯಿ ವೆಚ್ಚ ಮಾಡಿರುವುದು ಸದ್ಯ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.