newsics.com| ನ್ಯೂಸಿಕ್ಸ್
ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ಜೋಗಿಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ಕಾರು ಸ್ಫೋಟ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಮೃತ ನಾಗೇಂದ್ರನ ಕೊನೆಯ ಮೂರು ದಿನಗಳ ಸಂಚಾರದ ವಿವರಗಳು ಲಭ್ಯವಾಗಿವೆ. ಪ್ರೇಯಸಿ ರಮ್ಯಾ ತನಗೆ ಸಿಗುವುದಿಲ್ಲ ಎಂಬ ಕಾರಣಕ್ಕೆ ಅಂಕೋಲಾ ಮೂಲದ ನಾಗೇಂದ್ರ ನಾಡಬಾಂಬ್ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಎಸ್‌ಎಸ್‌ಎಲ್‌ಸಿ ಮುಗಿಸಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಸಾಮಾನ್ಯ ಯುವಕನಿಗೆ ಈ ಮಟ್ಟದ ಸ್ಫೋಟಕ ಎಲ್ಲಿಂದ ಸಿಕ್ಕಿತು ಎಂಬುದು ಸದ್ಯ ಪೊಲೀಸರನ್ನು ಕಾಡುತ್ತಿರುವ ದೊಡ್ಡ ಪ್ರಶ್ನೆಯಾಗಿದೆ.
ಕಳ್ಳಂಬೆಳ್ಳ ಪೊಲೀಸರು ನಾಗೇಂದ್ರನ ಮೊಬೈಲ್ ಲೊಕೇಶನ್ ಹಾಗೂ ನೆಟ್‌ವರ್ಕ್ ಪರಿಶೀಲಿಸಿದಾಗ ಆತನ ಕೊನೆಯ 72 ಗಂಟೆಗಳ ಓಡಾಟ ಪತ್ತೆಯಾಗಿದೆ. ಜೂನ್ 25 ರಂದು ಅಂಕೋಲಾದಿಂದ ನೇರವಾಗಿ ಬೆಂಗಳೂರಿಗೆ ಬಂದು ರಮ್ಯಾನನ್ನು ಭೇಟಿಯಾಗಿದ್ದ ನಾಗೇಂದ್ರ, ಅಂದೇ ರಾತ್ರಿ ಅಂಕೋಲಾಗೆ ವಾಪಸಾಗಿದ್ದ. ಮಾರನೆ ದಿನ ಜೂನ್ 26 ರಂದು ಇಡೀ ದಿನ ಅಂಕೋಲಾದ ಸಣ್ಣಪುಟ್ಟ ಗಲ್ಲಿಗಳಲ್ಲಿ ಸುತ್ತಾಡಿದ್ದ ಈತ, ಅದೇ ದಿನ ರಾತ್ರಿ ಮತ್ತೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದ. ಜೂನ್ 27 ರ ಮುಂಜಾನೆ ಬೆಂಗಳೂರಿನ ಸಿದ್ದಾಪುರದಲ್ಲಿರುವ ರಮ್ಯಾಳ ನಿವಾಸಕ್ಕೆ ತೆರಳಿ ಆಕೆಯೊಂದಿಗೆ ಮಾತನಾಡಿದ್ದ ನಾಗೇಂದ್ರ, ಅಲ್ಲಿಂದ ಹೊರಟು ನೇರವಾಗಿ ಶಿರಾದ ಜೋಗಿಹಳ್ಳಿ ಬಳಿ ಕಾರಿನಲ್ಲೇ ಬಾಂಬ್ ಸ್ಫೋಟಿಸಿಕೊಂಡಿದ್ದಾನೆ.
ಈ ಮೂರು ದಿನಗಳಲ್ಲಿ ಆತ 10 ಜನರನ್ನು ಖುದ್ದಾಗಿ ಭೇಟಿಯಾಗಿದ್ದು, 8 ಮಂದಿಯೊಂದಿಗೆ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದ ವಿಚಾರ ಬೆಳಕಿಗೆ ಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶಗಳಾದ ಯಲ್ಲಾಪುರ, ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾದಲ್ಲಿ ಪ್ರಾಣಿಗಳನ್ನು ಬೇಟೆಯಾಡಲು ಬಳಸುವ ಕಚ್ಚಾ ನಾಡಬಾಂಬ್ ನಾಗೇಂದ್ರನಿಗೆ ಸಿಕ್ಕಿದ್ದು ಹೇಗೆ ಎಂಬ ನಿಗೂಢತೆ ಮುಂದುವರಿದಿದೆ. ಪೊಲೀಸರು ಆತನ ಸ್ನೇಹಿತರು ಮತ್ತು ಸಂಬಂಧಿಕರನ್ನು ವಿಚಾರಣೆಗೆ ಒಳಪಡಿಸಿದರೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ, ನಾಗೇಂದ್ರನೇ ಪಟಾಕಿ ಮದ್ದು ಹಾಗೂ ಕಚ್ಚಾ ವಸ್ತುಗಳನ್ನು ತಂದು ಯೂಟ್ಯೂಬ್ ಸಹಾಯದಿಂದ ಸ್ವತಃ ಈ ಬಾಂಬ್ ತಯಾರಿಸಿರಬಹುದೇ ಎಂಬ ಹೊಸ ಆಯಾಮದಲ್ಲೂ ಕಳ್ಳಂಬೆಳ್ಳ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಮೃತ ನಾಗೇಂದ್ರ ಸದಾ ತನ್ನನ್ನು ಸಂಶಯಿಸುತ್ತಿದ್ದ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ರಮ್ಯಾ ಆರೋಪಿಸಿದ್ದಾಳೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಪ್ರತಿಕ್ರಿಯಿಸಿರುವ ನಾಗೇಂದ್ರನ ಕಡೆಯವರು, ಆತ ಊರಿನಲ್ಲಿ ಅತ್ಯಂತ ಸಭ್ಯ ಮತ್ತು ಶಾಂತ ಸ್ವಭಾವದ ಯುವಕನಾಗಿದ್ದ ಎಂದು ಹೇಳಿದ್ದಾರೆ. ರಮ್ಯಾ ಎಂಬ ಯುವತಿಯ ಪ್ರೀತಿಯ ಜಾಲಕ್ಕೆ ಬಿದ್ದ ಮೇಲೆಯೇ ಆತನ ಇಡೀ ಜೀವನ ದುರಂತದಲ್ಲಿ ಅಂತ್ಯವಾಯಿತು ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಪೊಲೀಸರು ಸ್ಫೋಟಕದ ಮೂಲದ ಹುಡುಕಾಟದಲ್ಲಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ.