newsics.com | ನ್ಯೂಸಿಕ್ಸ್
ಅಯೋಧ್ಯೆ/ ಬೆಂಗಳೂರು: ರಾಮಂದಿರದ (Ram Mandir) ದೇಣಿಗೆಯಲ್ಲಿ ಕೋಟಿ ಕೋಟಿ ಲೂಟಿ ಕೇಸ್ನ ತನಿಖೆ ಚುರುಕುಗೊಂಡಿರುವ ವೇಳೆಯಲ್ಲೇ ಈ ಸಂಬಂಧ ರಾಜ್ಯದಲ್ಲೂ ಇಬ್ಬರ ವಿರುದ್ಧ ದೂರು ದಾಖಲಾಗಿದೆ.
ಉತ್ತರ ಪ್ರದೇಶದ ಎಸ್ಐಟಿ (SIT) ಅಧಿಕಾರಿಗಳು ಎರಡು ಹಂತಗಳಲ್ಲಿ ಇಡೀ ಘಟನೆಯ ಬಗ್ಗೆ ಕೂಲಂಕಷ ತನಿಖೆ ಮುಂದುವರಿಸಿದ್ದಾರೆ. ಬಂಧಿತ ಎಂಟು ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿ,ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಅವರ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದ್ದು, ಅವುಗಳಲ್ಲಿನ ವಹಿವಾಟು ಕಂಡು ಪೊಲೀಸರೇ ಅಚ್ಚರಿಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಭದ್ರತಾ ವ್ಯವಸ್ಥೆಯಲ್ಲಿ ಗಂಭೀರ ದೋಷಗಳಿರುವ ಬಗ್ಗೆ ಎಸ್ಐಟಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ನಿಯಂತ್ರಣ ಕೊಠಡಿಯ ಉಸ್ತುವಾರಿ ಸೇರಿದಂತೆ 40 ಜನರು ತಪ್ಪಿತಸ್ಥರೆಂದು ಎಸ್‌ಐಟಿ ತನಿಖೆಯಲ್ಲಿ ಕಂಡುಬಂದಿದೆ.
ನಿಯಂತ್ರಣ ಕೊಠಡಿಯ ಉಸ್ತುವಾರಿ, ನಿಯಂತ್ರಣ ಕೊಠಡಿಯೊಳಗೆ ನಿಯೋಜಿಸಲಾದ ಸಿಬ್ಬಂದಿ, ಎಣಿಕೆ ಕೊಠಡಿಯ ಹೊರಗೆ ನಿಯೋಜಿಸಲಾದ ಖಾಸಗಿ ಭದ್ರತಾ ಸಿಬ್ಬಂದಿ, ಪೊಲೀಸ್ ಮತ್ತು ಪಿಎಸಿ ಸಿಬ್ಬಂದಿ ಸೇರಿದ್ದಾರೆ. ಜವಾಬ್ದಾರಿಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ. ಸಿಸಿಟಿವಿ ಮತ್ತು ಭದ್ರತಾ ವ್ಯವಸ್ಥೆಯಲ್ಲಿ ಬಹು ಹಂತಗಳಲ್ಲಿ ಭದ್ರತಾ ವ್ಯವಸ್ಥೆಯಲ್ಲಿ ಲೋಪವಾದ ಹಿನ್ನೆಲೆ ಭಾರೀ ಅಕ್ರಮ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಪ್ರತಿ ವ್ಯಕ್ತಿಯನ್ನೂ ಎಸ್ಐಟಿ ಪ್ರತ್ಯೇಕವಾಗಿ ತನಿಖೆ ಮಾಡುತ್ತಿದೆ.
ಶಾಸಕ ಪ್ರಭು ಚೌಹಾಣ್, ಆರ್ಎಸ್ಎಸ್ನ ಗೋಪಾಲ್ ವಿರುದ್ಧ ದೂರು
ಎಸ್ಐಟಿ ತನಿಖೆ ಮಧ್ಯೆ ಬೀದರ್ ಜಿಲ್ಲೆಯ ಔರಾದ್‌ನ ದೀಪಕ್ ಪಾಟೀಲ್ ಎಂಬುವರಿಂದ ಎಸ್ಐಟಿ ಮುಖ್ಯಸ್ಥ ವಿಜಯ್ ವಿಶ್ವಾಸ್ ಪಂತ್‌ಗೆ ದೂರು ಸಲ್ಲಿಸಿದ್ದಾರೆ.
ಮಂದಿರ ಹೆಸರಲ್ಲಿ ಲಕ್ಷಾಂತರ ದೇಣಿಗೆ ಸಂಗ್ರಹಿಸಿದ್ದಾರೆ ಎಂದು ಶಾಸಕ ಪ್ರಭು ಚೌಹಾಣ್, ಟ್ರಸ್ಟ್‌ನಲ್ಪಿರುವ ಆರ್ಎಸ್ಎಸ್ನ ಗೋಪಾಲ್ ವಿರುದ್ಧ ದೂರು ನೀಡಿದ್ದಾರೆ.
ಈ ಹಣವನ್ನು ರಾಮ ಮಂದಿರಕ್ಕೆ ತಲುಪಿಸಿದ ಬಗ್ಗೆ ಖಾತರಿಯಿಲ್ಲ. ಗುತ್ತಿಗೆದಾರರಿಂದ 5 ಲಕ್ಷದಿಂದ ದೊಡ್ಡ ಮೊತ್ತದವರೆಗೆ ಸಂಗ್ರಹಿಸಲಾಗಿದ್ದ ಹಣಕ್ಕೆ ಯಾವುದೇ ದಾಖಲಾತಿ ಕೂಡ ನೀಡಿಲ್ಲ ಎಂದಿದ್ದಾರೆ. ಅಯೋಧ್ಯೆ ರಾಮಮಂದಿರ ಹೆಸರಿನಲ್ಲಿ ಸಂಗ್ರಹಿಸಿದ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿರುವ ಬಗ್ಗೆ ದಾಖಲೆಗಳಿವೆ. ಎಸ್ಐಟಿಗೆ ದಾಖಲೆಗಳನ್ನು ಸಲ್ಲಿಸಲು ಸಿದ್ಧರಿದ್ದೇವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.