newsics.com/ನ್ಯೂಸಿಕ್ಸ್
ಹಣಕ್ಕಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ನಾಯಕ ದಯಾನಂದ ರೆಡ್ಡಿ ಅವರನ್ನ ಕಿಡ್ನಾಪ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಇನ್ನೂ, ತಡರಾತ್ರಿ 12:15ರ ಸುಮಾರಿಗೆ ದಯಾನಂದ ಅವರನ್ನ ಕಿಡ್ನಾಪ್ ಮಾಡಿ ಮೂರು ಕೋಟಿ ಹಣಕ್ಕೆ ಬೇಡಿಕೆಯಿಟ್ಟಿರುವ ಘಟನೆ ವರದಿಯಾಗಿದೆ.
ಏನಿದು ಘಟನೆ?
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಹಿಲಲಿಯಲ್ಲಿರುವ ಗೋಲ್ಡ್ ಕಾಯಿನ್ ಕ್ಲಬ್‌ನಿಂದ ಮನೆಗೆ, ವೆಲ್ ಫೇರ್ ಕಾರಿನಲ್ಲಿ ಹೊರಟಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ನಾಯಕ ದಯಾನಂದ ರೆಡ್ಡಿ ಅವರನ್ನ ಬೈಕ್‌ನಲ್ಲಿ ಇಬ್ಬರು ಅಡ್ಡಗಟ್ಟಿದ್ದಾರೆ. ಈ ವೇಳೆ, ನಿಮಗೆ ಗಿಫ್ಟ್ ಬಂದಿದೆ ಎಂದು ಕಾಟನ್ ಬಾಕ್ಸ್ ತೋರಿಸಿ ನಿಲ್ಲಿಸಿದ್ದಾರೆ.
ಇನ್ನೂ, ದಯಾನಂದ ಅವರ ಕಾರಿನ ಡೋರ್ ಲಾಕ್ ಓಪನ್ ಮಾಡುತ್ತಿದ್ದಂತೆ ಓರ್ವ ಕಾರಿಗೆ ನುಗ್ಗಿ, ಗನ್ ತೋರಿಸಿ ತಾನು ಹೇಳಿದ ಕಡೆ ಕಾರು ಚಲಾಯಿಸುವಂತೆ ಸೂಚನೆ ನೀಡಿದ್ದಾನೆ. ಅಷ್ಟೊತ್ತಿಗೆ ಕೆಂಪು ಬಣ್ಣದ ಕಾರಿನಲ್ಲಿ ಮತ್ತಿಬ್ಬರು ಹಿಂಬಾಲಿಸಿದ್ದಾರೆ. ಇದಾದ ನಂತರ, ಅತ್ತಿಬೆಲೆಯ KHB ಬಡಾವಣೆ ಬಳಿ ಕರೆದೊಯ್ದು ಪ್ರಾಣ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು, “ನಿನ್ನ ಕೊಲ್ಲಲು 10 ಕೋಟಿ ಸುಫಾರಿ ಕೊಟ್ಟಿದ್ದಾರೆ” ಎಂದು ಕುತ್ತಿಗೆಗೆ ಗನ್ ಇಟ್ಟು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.
ಹಣ ನಾನೇ ಕೊಡುತ್ತೇನೆ ಕೊಲ್ಲಬೇಡಿ ಎಂದು ಮನವಿ
ಈ ವೇಳೆ ದಯಾನಂದ ರೆಡ್ಡಿಯವರು ಆ ಹಣವನ್ನ ನಾನೇ ಕೊಡುತ್ತೇನೆ ಕೊಲ್ಲಬೇಡಿ ಎಂದು ಮನವಿ ಮಾಡಿದ್ದಾರೆ. ಅದರಂತೆ, ಮೊದಲು ಮೂರು ಕೋಟಿ ಡಿಮ್ಯಾಂಡ್ ಮಾಡಿದ ಕಿಡ್ನಾಪರ್ಸ್, ಅಂತಿಮವಾಗಿ ಎರಡು ಕೋಟಿಗೆ ಒಪ್ಪಿಕೊಂಡಿದ್ದಾರೆ. ಆದರೆ, ಈಗ ಹಣ ಇಲ್ಲ ಬೆಳಗ್ಗೆ ಬ್ಯಾಂಕ್ ಓಪನ್ ಟೈಮ್‌ಗೆ ನೀಡುವುದಾಗಿ ಮನವಿ ಮಾಡಿದ್ದಾರೆ.
ಮುಂದುವರೆದು, ಹಣ ಡ್ರಾ ಮಾಡಿದ ಬಳಿಕ ಫೋನ್ ಮಾಡುವಂತೆ ತಿಳಿಸಿ, ಫೋನ್ ನಂಬರ್ ನೀಡಿ ಮುಂಜಾನೆ 4 ಗಂಟೆ ಸುಮಾರಿಗೆ ಬಿಟ್ಟು ಕಳುಹಿಸಿರುವುದಾಗಿ ದೂರು ನೀಡಿದ್ದಾರೆ. ಏತನ್ಮಧ್ಯೆ, ದೂರು ಆಧರಿಸಿ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಕಿಡ್ನಾಪರ್ಸ್‌ಗಾಗಿ ಪೊಲೀಸರಿಂದ ಶೋಧ ಕಾರ್ಯ ಮುಂದುವರೆದಿದೆ.