newsics.com/ನ್ಯೂಸಿಕ್ಸ್
ಪ್ರೀತಿಗೆ ಕಣ್ಣಿಲ್ಲ, ಪ್ರೀತಿಯ ಮುಂದೆ ದೂರ ಒಂದು ಲೆಕ್ಕವಲ್ಲ ಎಂಬುದನ್ನು ಈ ಜೋಡಿ ಸಾಬೀತುಪಡಿಸಿದೆ. ಅಮೆರಿಕದ ನ್ಯೂಜೆರ್ಸಿಯಲ್ಲಿ ವಾಸಿಸುತ್ತಿದ್ದ ಯುವತಿಯೊಬ್ಬಳು, ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿರುವ ತನ್ನ ಪ್ರಿಯತಮನನ್ನು ಭೇಟಿಯಾಗಲು ಏಳು ಸಮುದ್ರಗಳನ್ನು ದಾಟಿ ಬಂದಿದ್ದಾಳೆ.
ಈ ಕಥೆ ಸುಮಾರು ಮೂರು ವರ್ಷಗಳ ಹಿಂದೆ ಶುರುವಾಯಿತು. 2023ರ ಸುಮಾರಿಗೆ ಹಿಮಾಂಶು ಮತ್ತು ಬ್ರೂಕ್ ಆನ್‌ಲೈನ್‌ನಲ್ಲಿ ಪಬ್‌ಜಿ ಆಡುವಾಗ ಪರಿಚಯವಾದರು. ಆಟವಾಡುತ್ತಿರುವಾಗ ಮೈಕ್ ಆನ್ ಮಾಡಿ ಮಾತನಾಡುತ್ತಾ, ಅವರ ನಡುವೆ ಸ್ನೇಹ ಚಿಗುರಿತು. ಆಟದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳುತ್ತಾ, ದಿನ ಕಳೆದಂತೆ ಫೋನ್ ಕರೆಯಲ್ಲಿ ಹೆಚ್ಚು ಮಾತನಾಡಲು ಶುರು ಮಾಡಿದರು.
ನಂತರ ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್ ಮೂಲಕ ಸಂಪರ್ಕ ಸಾಧಿಸಿದರು. ಪ್ರತಿದಿನ ಗಂಟೆಗಟ್ಟಲೆ ವಿಡಿಯೋ ಕಾಲ್‌ನಲ್ಲಿ ಮಾತನಾಡಲು ಪ್ರಾರಂಭಿಸಿದರು. ಭಾಷೆ, ಸಂಸ್ಕೃತಿ ಬೇರೆಯಾದರೂ ಮನಸ್ಸುಗಳು ಒಂದಾದವು. ಆ ಸ್ನೇಹ ನಿಧಾನವಾಗಿ ಗಾಢ ಪ್ರೀತಿಯಾಗಿ ಬದಲಾಯಿತು.
ಹಿಮಾಂಶುವನ್ನು ಭೇಟಿಯಾಗಿ ಅವರೊಂದಿಗೆ ಜೀವನ ನಡೆಸಲು ನಿರ್ಧರಿಸಿದ ಬ್ರೂಕ್, ಅಮೆರಿಕದಿಂದ ಭಾರತಕ್ಕೆ ಬರಲು ವೀಸಾ ಸಿದ್ಧಪಡಿಸಿಕೊಂಡಳು. ತಾಯಿಯ ಅನುಮತಿಯೊಂದಿಗೆ ಅಮೆರಿಕದಿಂದ ದೆಹಲಿಗೆ ವಿಮಾನದ ಟಿಕೆಟ್ ಬುಕ್ ಮಾಡಿಕೊಂಡಳು. ಸುಮಾರು 12,000 ಕಿಲೋಮೀಟರ್ ಪ್ರಯಾಣಿಸಿ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಳು.
ಅಲ್ಲಿಂದ ನೇರವಾಗಿ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಭರ್ತಾನಾದಲ್ಲಿರುವ ಹಿಮಾಂಶುವಿನ ಮನೆಗೆ ತಲುಪಿದಳು. ಕಳೆದ ಮೂರು ವರ್ಷಗಳಿಂದ ಕೇವಲ ಮೊಬೈಲ್ ಪರದೆಯ ಮೇಲೆ ನೋಡುತ್ತಿದ್ದ ತನ್ನ ಪ್ರಿಯತಮನನ್ನು ಕಣ್ಣಾರೆ ನೋಡಿದಾಗ ಬ್ರೂಕ್ ಕಣ್ಣಾಲಿಗಳು ಆನಂದಭಾಷ್ಪದಿಂದ ತುಂಬಿದವು.
ಈ ವಿದೇಶಿ ಸೊಸೆಯನ್ನು ನೋಡಲು ಹಿಮಾಂಶುವಿನ ಮನೆಯ ಮುಂದೆ ಜನ ಜಮಾಯಿಸಿದರು. ಈ ಸುದ್ದಿ ಹರಡಿ ಕೊನೆಗೆ ಸ್ಥಳೀಯ ಪೊಲೀಸರಿಗೆ ತಲುಪಿತು.
ವಿದೇಶಿ ಮಹಿಳೆ ಬಂದಿರುವ ಕಾರಣ, ಭದ್ರತಾ ದೃಷ್ಟಿಯಿಂದ ಇಟಾವಾ ಪೊಲೀಸರು ಹಿಮಾಂಶುವಿನ ಮನೆಗೆ ಭೇಟಿ ನೀಡಿದರು. ಬ್ರೂಕ್ ಮಾರ್ಲೆ ಅವರ ಪಾಸ್‌ಪೋರ್ಟ್ ಮತ್ತು ವೀಸಾವನ್ನು ಪರಿಶೀಲಿಸಿದರು. ಆಕೆಯ ವೀಸಾ ಮೂರು ತಿಂಗಳ ಅವಧಿಗೆ (ಪ್ರವಾಸಿ ವೀಸಾ) ಮಾನ್ಯವಾಗಿದೆ ಮತ್ತು ಎಲ್ಲವೂ ಕಾನೂನುಬದ್ಧವಾಗಿದೆ ಎಂದು ಪೊಲೀಸರು ದೃಢಪಡಿಸಿದರು.
iPhone effect ಐಫೋನ್ ಇದ್ರೆ ಮಕ್ಕಳಾಗೋದಿಲ್ವಾ? ಅಮೆರಿಕದ ವರದಿ ನೋಡಿ ಜಗತ್ತೇ ತಲ್ಲಣ! ವರದಿ ಹೇಳ್ತಿರೋದೇನು?