newsics.com/ನ್ಯೂಸಿಕ್ಸ್
ಪರಸ್ಪರ ಒಪ್ಪಿಗೆಯಿಂದ ವಯಸ್ಕರು ಮದುವೆಗೂ ಮುನ್ನ ದೈಹಿಕ ಸಂಬಂಧ ಹೊಂದುವುದನ್ನು ತಪ್ಪೆಂದು ಪರಿಗಣಿಸಲಾಗದು ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.
ಸುಪ್ರೀಕೋರ್ಟ್ ನ್ಯಾಯಮೂರ್ತಿ ಮನಮೋಹನ್ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ, ಈ ಆದೇಶ ಕೊಟ್ಟಿದೆ. 2014 ರಲ್ಲಿ ತೆಲಂಗಾಣ ವ್ಯಕ್ತಿಯ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು ಎಂಬ ಕಾರಣಕ್ಕೆ ತೆಲಂಗಾಣ ರಾಜ್ಯಮಟ್ಟದ ಪೊಲೀಸ್ ನೇಮಕಾತಿ ಬೋರ್ಡ್ ಕಾನ್ಸ್ ಸ್ಟೇಬಲ್ ಟ್ರೈನಿಂಗ್ ಗೆ ಅಭ್ಯರ್ಥಿಯ ಆಯ್ಕೆಯನ್ನು ರದ್ದು ಮಾಡಿತ್ತು.
ಮದುವೆಯ ಸುಳ್ಳು ಭರವಸೆ ನೀಡಿ ಮಹಿಳೆಯೊಬ್ಬರ ಜೊತೆ ದೈಹಿಕ ಸಂಬಂಧ ಬೆಳೆಸಿದ ಆರೋಪ ಆತನ ಮೇಲಿತ್ತು. ಆದರೆ, ಈ ಪ್ರಕರಣವು 2015 ರಲ್ಲಿ ‘ಲೋಕ್ ಅದಾಲತ್’ ಮೂಲಕ ರಾಜಿಯಾಗಿ ಇತ್ಯರ್ಥಗೊಂಡಿತ್ತು. ಅಭ್ಯರ್ಥಿಯು ಈ ವಿಷಯವನ್ನು ತನ್ನ ಉದ್ಯೋಗದ ಅರ್ಜಿಯಲ್ಲೇ ಪ್ರಾಮಾಣಿಕವಾಗಿ ತಿಳಿಸಿದ್ದನು.
ಇಬ್ಬರು ವಯಸ್ಕರು (ಮೇಜರ್) ಸ್ವಇಚ್ಛೆಯಿಂದ ಒಟ್ಟಿಗೆ ಇದ್ದರೆ, ಅದನ್ನು ‘ನೈತಿಕ ಪತನ’ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.ಪ್ರೀತಿಸುವ ಪ್ರತಿಯೊಂದು ಸಂಬಂಧವು ಮದುವೆಯಾಗಿಯೇ ತೀರಬೇಕು ಎಂದೇನಿಲ್ಲ. ಕೇವಲ ಮದುವೆಯಾಗಲಿಲ್ಲ ಎಂಬ ಕಾರಣಕ್ಕೆ ಒಬ್ಬರು ಇನ್ನೊಬ್ಬರನ್ನು ಮೋಸ ಮಾಡಿದ್ದಾರೆ ಎಂದು ಹೇಳಲಾಗದು. ಇದರ ಆಧಾರದ ಮೇಲೆ ಯಾರ ವ್ಯಕ್ತಿತ್ವವನ್ನೂ (Character) ಪ್ರಶ್ನಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.
ತೆಲಂಗಾಣದ ಗಜವೇಲ್‌ನ ನಿವಾಸಿ ಗಾಜುಲ ತಿರುಪತಿ ಎಂಬ ಅಭ್ಯರ್ಥಿಯ ಆಯ್ಕೆಯನ್ನು ರದ್ದುಪಡಿಸಿದ್ದ ತೆಲಂಗಾಣ ಪೊಲೀಸ್ ನೇಮಕಾತಿ ಮಂಡಳಿಯ ನಿರ್ಧಾರವನ್ನು ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರ ಪೀಠವು ರದ್ದುಗೊಳಿಸಿದೆ.