newsics.com/ನ್ಯೂಸಿಕ್ಸ್
ಸಿಜೆಐ ಅವರು ನಿರುದ್ಯೋಗಿ ಯುವಕರ ಬಗ್ಗೆ ನೀಡಿದ ಹೇಳಿಕೆಯಿಂದ ಹುಟ್ಟಿಕೊಂಡು ಸಾಮಾಜಿಕ ಜಾಲತಾಣದ ಮೂಲಕ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿರುವ ಜಿರಳೆ ಪಕ್ಷ(ಸಿಜೆಪಿ) ತನ್ನ ಅಭಿಯಾನವನ್ನು ಅಧಿಕೃತವಾಗಿ ಆರಂಭ ಮಾಡಿದ್ದು, ಅದಕ್ಕೆ ‘ಜಿರಳೆಯ ಜೀವನ’ (ಲೈಫ್ ಆಫ್ ಕಾಕ್ರೋಚ್) ಎಂದು ಹೆಸರಿಟ್ಟಿದೆ.
ಈ ಬಗ್ಗೆ ಪಕ್ಷದ ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದ್ದು, ಅದರಲ್ಲಿ, ‘ಸರ್ಕಾರದ ದುಃಸ್ಥಿತಿಯಿಂದ ಬೇಸತ್ತಿದ್ದರೂ ಅದರ ವಿರುದ್ಧ ಧ್ವನಿ ಎತ್ತಲಾಗದ ಅಥವಾ ಆ ಕೂಗನ್ನು ಸರಿಯಾದವರಿಗೆ ತಲುಪಿಸಲಾಗದ ಈ ಅಭಿಯಾನವನ್ನು ಆರಂಭ ಮಾಡಲಾಗುತ್ತಿದೆ. ಇದು, ಯುವಕರ ಸ್ಥಿತಿಯನ್ನು ನಾಯಕರಿಗೆ ತೋರಿಸುತ್ತದೆ ಹಾಗೂ ಕಾರ್ಯಪ್ರವೃತ್ತರಾಗುವಂತೆ ಅವರ ಮೇಲೆ ಒತ್ತಡ ಹೇರುತ್ತದೆ’ ಎಂದು ಜಿರಳೆಯೊಂದು ಹೇಳುತ್ತಿರುವಂತೆ ತೋರಿಸಲಾಗಿದೆ.
#LifeOfACockroach ಹ್ಯಾಷ್‌ಟ್ಯಾಗ್ ಬಳಸಿ ಪೋಸ್ಟ್
ಅಭಿಯಾನದ ಭಾಗವಾಗಿ, ಸರ್ಕಾರಿ ಶಾಲೆ, ಆಸ್ಪತ್ರೆಗಳ ದುಸ್ಥಿತಿ, ಕಚೇರಿಗಳಲ್ಲಾಗುತ್ತಿರುವ ಭ್ರಷ್ಟಾಚಾರ, ರಸ್ತೆಯಲ್ಲಿರುವ ಕಸದ ರಾಶಿ, ಗುಂಡಿಬಿದ್ದ ರಸ್ತೆ, ಕುಡಿವ ನೀರು, ಹಿಂದುಳಿದ ವರ್ಗದವರು ಅಥವಾ ಮಹಿಳೆಯರ ಮೇಲೆ ವ್ಯವಸ್ಥೆಯ ದಬ್ಬಾಳಿಕೆ ಇತ್ಯಾದಿಗಳ ಫೋಟೋ/ವಿಡಿಯೋ ಮಾಡಿ, ಸಿಜೆಪಿಯನ್ನು ಟ್ಯಾಗ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ #LifeOfACockroach ಹ್ಯಾಷ್‌ಟ್ಯಾಗ್ ಬಳಸಿ ಪೋಸ್ಟ್ ಮಾಡಲು ಯುವಕರಲ್ಲಿ ವಿನಂತಿಸಲಾಗಿದೆ. ಜತೆಗೆ ಇಂತಹ ಸಮಸ್ಯೆಗಳನ್ನು ಮುನ್ನೆಲೆಗೆ ತಂದು, ಆರ್‌ಟಿಐ ಅರ್ಜಿ ಸಲ್ಲಿಸಿ, ಮಾಧ್ಯಮಗಳ ಗಮನಕ್ಕೆ ತಂದು ನಾಯಕರ ಮೇಲೆ ಒತ್ತಡ ಹೇರಲಾಗುವುದು ಎನ್ನಲಾಗಿದೆ.
ಸಾಮಾಜಿಕ ಮಾಧ್ಯಮ ಖಾತೆಗಳು ಬ್ಯಾನ್ ಆದರೂ ಹೊಸ ಖಾತೆಗಳ ಮೂಲಕ ಮತ್ತೆ ಪುಟಿದೆದ್ದಿರುವ ಪಕ್ಷವು ದಿನೇದಿನೇ ಬೆಂಬಲಿಗರನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿದೆ.