newsics.com/ನ್ಯೂಸಿಕ್ಸ್
ಡೇಟಿಂಗ್ ಆ್ಯಪ್‌ಗಳ ಮೂಲಕ ನಡೆಯುವ ವಂಚನೆಗಳು ಈಗ ಆತಂಕಕಾರಿ ಮಟ್ಟಕ್ಕೆ ತಲುಪಿವೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಸುಂದರ ಯುವತಿಯ ಮಾತುಗಳನ್ನು ನಂಬಿ ಬರೋಬ್ಬರಿ 1.66 ಕೋಟಿ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ
ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಸೌರವ್ ದುಬೆ ಎಂಬುವರು ಫೆಬ್ರವರಿ 15 ರಂದು ‘ಟಾಂಟನ್’ (Tantan) ಡೇಟಿಂಗ್ ಆ್ಯಪ್ ಮೂಲಕ ರಿಯಾ ಅಗರ್ವಾಲ್ ಎಂಬುವವರನ್ನು ಪರಿಚಯ ಮಾಡಿಕೊಂಡರು.ಆರಂಭದಲ್ಲಿ ಸಾಮಾನ್ಯ ಚಾಟಿಂಗ್ ಮೂಲಕ ಶುರುವಾದ ಪರಿಚಯ, ದಿನಗಳೆದಂತೆ ಆಡಿಯೋ ಮತ್ತು ವಿಡಿಯೋ ಕರೆಗಳ ಮೂಲಕ ಆತ್ಮೀಯತೆಯಾಗಿ ಬೆಳೆಯಿತು.ಮದುವೆಯಾಗುವುದಾಗಿ ನಂಬಿಸಿ ಆಕೆ ಸೌರವ್ ಅವರನ್ನು ತನ್ನ ಮಾತುಗಳ ಬಲೆಗೆ ಬೀಳಿಸಿಕೊಂಡರು.
ಸೌರವ್ ಸಂಪೂರ್ಣವಾಗಿ ನಂಬಿದ್ದಾರೆ ಎಂದು ಖಚಿತಪಡಿಸಿಕೊಂಡ ಆಕೆ, ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಅಲ್ಪಾವಧಿಯಲ್ಲಿ ಕೋಟಿಗಟ್ಟಲೆ ಲಾಭ ಗಳಿಸಬಹುದು ಎಂದು ಆಮಿಷವೊಡ್ಡಿದರು.ರಿಯಾನ ಮಾತುಗಳನ್ನು ನಂಬಿದ ಸೌರವ್, ಮೂರು ತಿಂಗಳ ಅವಧಿಯಲ್ಲಿ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಒಟ್ಟು 1.66 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದರು.
ಆದರೆ, ಸೌರವ್‌ಗೆ ಕೇವಲ 4,250 ರೂಪಾಯಿ ಮಾತ್ರ ಹಿಂತಿರುಗಿ ಬಂದಿತು. ತನ್ನ ಹಣ ಹಾಗೂ ಲಾಭದ ಬಗ್ಗೆ ಕೇಳಿದಾಗ ಆಕೆ ಸಬೂಬು ಹೇಳಲು ಆರಂಭಿಸಿದರು.ಸೌರವ್ ತೀವ್ರವಾಗಿ ಪ್ರಶ್ನಿಸಿದಾಗ, ಆಕೆ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾದರು.
ತಾನು ಮೋಸ ಹೋಗಿರುವುದನ್ನು ಅರಿತ ಸೌರವ್, ಬೆಂಗಳೂರಿನ ಸೌತ್ ಈಸ್ಟ್ ವಿಭಾಗದ ಸಿಇಎನ್ (CEN) ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.