newsics.com
ಬೆಂಗಳೂರು : ವಿದೇಶದಿಂದ ಅಕ್ರಮವಾಗಿ ಚಿನ್ನ ಕಳ್ಳ ಸಾಗಣೆ ಮಾಡಿದ ಆರೋಪ ಎದುರಿಸುತ್ತಿರುವ ನಟಿ ರನ್ಯಾ ರಾವ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಅವರ ವಿರುದ್ಧ ಕೇಂದ್ರ ಆರ್ಥಿಕ ಗುಪ್ತಚರ ಬ್ಯೂರೋ ಹೊರಡಿಸಿದ್ದ ಮುನ್ನೆಚ್ಚರಿಕೆ ಬಂಧನ ಆದೇಶವನ್ನು ಸುಪ್ರೀಂಕೋರ್ಟ್ ಗುರುವಾರ ಎತ್ತಿಹಿಡಿದಿದೆ.
ವಿಭಾಗೀಯ ಪೀಠವು, ರನ್ಯಾ ರಾವ್ ಅವರ ತಾಯಿ ಮತ್ತು ಮತ್ತೊಬ್ಬ ಆರೋಪಿ ಸಾಹಿಲ್ ಸಕಾರಿಯಾ ಜೈನ್ ಅವರ ಸಂಬಂಧಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿತು. ಈ ಹಿಂದೆ 2025ರ ಡಿ.19ರಂದು ಕರ್ನಾಟಕ ಹೈಕೋರ್ಟ್ ಈ ಬಂಧನ ಆದೇಶಗಳನ್ನು ಎತ್ತಿಹಿಡಿದಿತ್ತು,
ಇದೀಗ ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್ ಆದೇಶವನ್ನು ಸರಿ ಎಂದು ಹೇಳಿದಂತಾಗಿದೆ. 2025 ಮಾರ್ಚ್‌ನಲ್ಲಿ ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ರನ್ಯಾ ಅವರನ್ನು ತಪಾಸಣೆ ನಡೆಸಿದಾಗ, ಸುಮಾರು 14.2 ಕೇಜಿ ತೂಕದ ಚಿನ್ನದ ಬಿಸ್ಕೆಟ್‌ಗಳು ಪತ್ತೆಯಾಗಿದ್ದವು.
ರನ್ಯಾ ರಾವ್ ಅವರನ್ನು 2025ರ ಮಾರ್ಚ್ 3ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ವಶಕ್ಕೆ ಪಡೆದಿತ್ತು. ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ಮಹಿಳಾ ಪ್ರಯಾಣಿಕರೊಬ್ಬರು ದುಬೈ, ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಭಾರತದ ಬೆಂಗಳೂರಿಗೆ ಬಾರ್‌ಗಳು ಹಾಗೂ ಪೇಸ್ಟ್ ರೂಪದಲ್ಲಿ ಚಿನ್ನವನ್ನು ಸಾಗಿಸುತ್ತಿದ್ದಾರೆ ಎಂದು ಬೆಂಗಳೂರು ವಲಯ ಘಟಕದ DRIಗೆ ನಿರ್ದಿಷ್ಟ ಗುಪ್ತಚರ ಮಾಹಿತಿ ಲಭಿಸಿತ್ತು. ಅಧಿಕಾರಿಗಳು ಸುಮಾರು 14.2 ಕಿಲೋಗ್ರಾಂಗಳಷ್ಟು ತೂಕದ ಚಿನ್ನದ ಬಾರ್‌ಗಳನ್ನು ವಶಪಡಿಸಿಕೊಂಡಿದ್ದರು.
ಮಾರ್ಚ್ 4, 2025ರಂದು ರಾವ್ ಅವರನ್ನು ಬಂಧಿಸಿದ್ದ ಅಧಿಕಾರಿಗಳು ಮಾರ್ಚ್ 10ರಂದು ಕಸ್ಟಮ್ಸ್ ಕಾಯ್ದೆ, 1962ರ ಸೆಕ್ಷನ್ 108ರ ಅಡಿಯಲ್ಲಿ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು. ಬಳಿಕ ಮಾರ್ಚ್ 12ರಂದು ಅವರ ಸಹಚರ ತರುಣ್ ಕೊಂಡೂರು ರಾಜು ಹೇಳಿಕೆ ದಾಖಲಿಸಲಾಯಿತು. ಈ ಹೇಳಿಕೆಗಳ ಆಧಾರದ ಮೇಲೆ ಜೈನ್ ಅವರನ್ನು ಏಪ್ರಿಲ್ 7ರಂದು ಅಧಿಕಾರಿಗಳು ಬಂಧಿಸಿದ್ದರು.