ಮೀನು ಹಿಡಿಯುತ್ತಿದ್ದಾಗ ಜೀವಂತ ಮೀನೊಂದು ಗಂಟಲಿನಲ್ಲಿ ಸಿಲುಕಿಕೊಂಡು ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಒಡಿಶಾದ (Odisha) ಮಯೂರ್‌ಭಂಜ್ ಜಿಲ್ಲೆಯಲ್ಲಿ ನಡೆದಿದೆ. ಬಂಗ್ರಿಪೋಸಿ ಪೊಲೀಸ್ ಠಾಣೆ ವ್ಯಾಪ್ತಿಯ ದಿಘಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ಅಬಿನಾಶ್ ಬಿಜುಲಿ ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಅಬಿನಾಶ್ ಬೆಳಿಗ್ಗೆ ಹಳ್ಳಿಯ ಕೊಳದಲ್ಲಿ ಮೀನುಗಾರಿಕೆಗೆ ಹೋಗಿದ್ದಾಗ ‘ಕಾವ್’ (Indian Koi) ಮೀನು ಸಿಕ್ಕಿತು. ಮೀನು ಜಾರಿಬೀಳುವುದನ್ನು ತಡೆಯುವುದಕ್ಕಾಗಿ, ಅವನು ಜೀವಂತ ಮೀನನ್ನು ತನ್ನ ಬಾಯಿಯಲ್ಲಿ ಇಟ್ಟುಕೊಂಡಿದ್ದಾನೆ.
ಆದರೆ, ಮೀನು ಹೊರಳಾಡುತ್ತಾ ಅವನ ಗಂಟಲಿನೊಳಗೆ ಸಿಲುಕಿಕೊಂಡಿದೆ. ಇದರಿಂದ ಅಬಿನಾಶ್‌ಗೆ ಉಸಿರುಗಟ್ಟಿದೆ. ಮೀನನ್ನು ಹೊರತೆಗೆಯಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಇದರಿಂದ ಅಬಿನಾಶ್ ಉಸಿರುಗಟ್ಟಿ ಮೃತಪಟ್ಟಿದ್ದಾನೆ.