https://youtube.com/shorts/9RsasXrq5aU?si=7o1s1Fcwa742mk87
Subscribe ನ್ಯೂಸಿಕ್ಸ್ ಕನ್ನಡ
newsics.com
6 ರಿಂದ 9ನೇ ತರಗತಿ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆಯ ಮೌಲ್ಯಮಾಪನದ ಗೌಪ್ಯತೆ ಕಾಪಾಡಲು ಮತ್ತು ಶೈಕ್ಷಣಿಕ ಉತ್ಕೃಷ್ಟತೆ ಹೆಚ್ಚಿಸಲು ರಾಜ್ಯ ಮಟ್ಟದಿಂದಲೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ನೀಡಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಿದ್ಧವಾಗಿದ್ದು, ಸರ್ಕಾರದ ಅಂತಿಮ ನಿರ್ದೇಶನಕ್ಕಾಗಿ ಕಾಯುತ್ತಿದೆ.
ಈವರೆಗೆ ಆಯಾ ಶಾಲಾ ಹಂತದಲ್ಲೇ 9ನೇ ತರಗತಿವರೆಗಿನ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಿಕೊಂಡು ಪರೀಕ್ಷೆ ನಡೆಸಿ, ಮೌಲ್ಯಮಾಪನ ಮಾಡಿ ಎಲ್ಲರನ್ನೂ ತೇರ್ಗಡೆ ಮಾಡಲಾಗುತ್ತಿತ್ತು.
ಶಿಕ್ಷಣ ಹಕ್ಕು ಕಾಯ್ದೆಯಂತೆ 1ರಿಂದ 9ನೇ ತರಗತಿಯ ಎಲ್ಲ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಬೇಕು. ಹೀಗಾಗಿ ಪರೀಕ್ಷೆ ನಡೆಸಿ ಮೌಲ್ಯಮಾಪನ ಮಾತ್ರ ಮಾಡಲಾಗುತ್ತದೆ. ಇದೇ ಪದ್ಧತಿ ಮುಂದುವರಿಯುತ್ತದೆ. ಆದರೆ ಈಗ ಎಸ್ಸೆಸ್ಸೆಲ್ಸಿ ಫಲಿತಾಂಶ ಇನ್ನಷ್ಟು ಸುಧಾರಣೆಗಾಗಿ ಶಾಲಾ ಹಂತದಲ್ಲಿ ಪ್ರಶ್ನೆಪತ್ರಿಕೆ ಮತ್ತು ಮೌಲ್ಯಮಾಪನ ವಿಷಯವಾಗಿ ಒಂದಿಷ್ಟು ಕಠಿಣ ನಿಲುವು ತಳೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವರ್ಷದಲ್ಲಿ ರೂಪಣಾತ್ಮಕ 4 ಹಾಗೂ ಸಂಕಲನಾತ್ಮಕ 2 ಮೌಲ್ಯಮಾಪನ (ಪರೀಕ್ಷೆ) ಮಾಡಲಾಗುತ್ತದೆ. ಸಂಕಲನಾತ್ಮಕ ಮೌಲ್ಯಮಾಪನವನ್ನು ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಹಾಗೂ ಕೊನೆಯಲ್ಲಿ ನಡೆಸಲಾಗುತ್ತದೆ. ಈ ಬಾರಿ ಕೊನೆಯ ಸಂಕಲನಾತ್ಮಕ ಮೌಲ್ಯಮಾಪನಕ್ಕೆ ರಾಜ್ಯಮಟ್ಟದಿಂದಲೇ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ನೀಡುವ ಸಾಧ್ಯತೆಯಿದೆ. ಆದರೆ ಇನ್ನೂ ಅಂತಿಮವಾಗಿಲ್ಲ.
ವೇಳಾಪಟ್ಟಿ ಅಂತಿಮ:
ಈಗಾಗಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಶಿಕ್ಷಣ ಇಲಾಖೆಯ ಸೂಚನೆ ಅನುಸಾರ ಸಂಕಲನಾತ್ಮಕ ಮೌಲ್ಯಮಾಪನದ ಅಂತಿಮ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಡಿಡಿಪಿಐ ಕಚೇರಿಯಿಂದ ಶಾಲೆಗಳಿಗೆ ಅವುಗಳ ರವಾನೆಯೂ ಆಗಿದೆ. ಅದರಂತೆ ವಿಷಯವಾರು ಶಿಕ್ಷಕರು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರು ಪ್ರಶ್ನೆಪತ್ರಿಕೆಗಳನ್ನು ತಯಾರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ರಾಜ್ಯಮಟ್ಟದಿಂದಲೇ ಪ್ರಶ್ನೆಪತ್ರಿಕೆ ನೀಡಲಾಗುತ್ತಿದೆ ಎಂಬ ಮಾಹಿತಿ ಅಧಿಕೃತವಾಗಿ ಡಿಡಿಪಿಐ, ಬಿಇಒ ಕಚೇರಿ ಹಾಗೂ ಶಾಲೆಗಳಿಗೆ ಬಂದಿಲ್ಲ. ಆದರೆ ಮಾದರಿ ಪ್ರಶ್ನೆಪತ್ರಿಕೆ ಬರಬಹುದು ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ)ಯ ಮೂಲಗಳು ಪ್ರಾಥಮಿಕ ಮಾಹಿತಿ ನೀಡಿವೆ. ಆದರೆ ಇನ್ನೂ ಮಾದರಿ ಪ್ರಶ್ನೆಪತ್ರಿಕೆಯನ್ನು ರವಾನೆ ಮಾಡಿಲ್ಲ. ಹೀಗಾಗಿ ಶಾಲೆಗಳಲ್ಲೂ ಗೊಂದಲವಿದೆ.
ಮೌಲ್ಯಮಾಪನ ಹೇಗೆ?
ಪ್ರಸ್ತುತ ಆಯಾ ಶಾಲಾ ಶಿಕ್ಷಕರೇ ಸಂಕಲನಾತ್ಮಕ ಮೌಲ್ಯಮಾಪನ ನಡೆಸಿ, ವಿದ್ಯಾರ್ಥಿಗಳಿಗೆ ಕಲಿಕೆಯ ಆಧಾರದಲ್ಲಿ ನಿರ್ದಿಷ್ಟ ಅಂಕ ನೀಡಿ ತೇರ್ಗಡೆ ಮಾಡುತ್ತಾರೆ. ಈ ಬಾರಿ ಮೌಲ್ಯಮಾಪನ ಗೌಪ್ಯತೆ ಕಾಪಾಡುವ ಯೋಜನೆ ಇರುವುದರಿಂದ ಹೇಗೆ ಮಾಡಲಿದ್ದಾರೆ ಎಂಬ ಕುತೂಹಲ ಶಿಕ್ಷಕರಲ್ಲೂ ಇದೆ.
2024ರಲ್ಲೂ ಪ್ರಯತ್ನ ನಡೆದಿತ್ತು
5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಇಲಾಖೆಯು 2024ರಲ್ಲಿ ಪ್ರಯತ್ನ ನಡೆಸಿತ್ತು. ಆದರೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದ್ದರಿಂದ ಪ್ರಸ್ತಾವನೆಯನ್ನು ಕೈಬಿಟ್ಟಿತ್ತು. ಈಗ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಮೌಲ್ಯಮಾಪನ ಗೌಪ್ಯತೆಗೆ ಇಲಾಖೆ ಮುಂದಾಗಿದೆ.