https://youtube.com/shorts/meQfr5hOsT4?si=–SvccKUHgJJVjWK
Subscribe ನ್ಯೂಸಿಕ್ಸ್ ಕನ್ನಡ
newsics.com
ಇತ್ತೀಚೆಗೆ ಬ್ರೆಜಿಲ್ ಸರ್ಕಾರ ಮತ್ತು ಅಲ್ಲಿನ ಕೈಗಾರಿಕಾ ಸಂಘಟನೆ Brazilian Animal Protein Association (ABPA) ಭಾರತಕ್ಕೆ ಹೆಚ್ಚು ಪ್ರಮಾಣದಲ್ಲಿ ಕೋಳಿ ಮಾಂಸ ರಫ್ತು ಮಾಡುವ ಬಗ್ಗೆ ಚರ್ಚೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಇಂದು ಭಾರತಕ್ಕೆ ಭೇಟಿ ಕೊಟ್ಟ ಅಧ್ಯಕ್ಷರ ಜತೆಗಿನ ಮಾತುಕಥೆಗಳು ಪುಷ್ಠಿ ನೀಡಬಹುದು. ಇದಕ್ಕೆ ಬದಲಾಗಿ ಭಾರತದಿಂದ ಕೆಲವು ಹಣ್ಣುಗಳು ಮತ್ತು ಬೀಜಗಳನ್ನು ಬ್ರೆಜಿಲ್ ಆಮದು ಮಾಡಿಕೊಳ್ಳಲು ಸಿದ್ಧವಾಗಿದೆ.
ಬ್ರೆಜಿಲ್ ವಿಶ್ವದ ಅತಿದೊಡ್ಡ ಕೋಳಿ ರಫ್ತುದಾರ ದೇಶ!
ಪ್ರಸ್ತುತ ಬ್ರೆಜಿಲ್ ವಿಶ್ವದ ಅತಿದೊಡ್ಡ ಕೋಳಿ ರಫ್ತುದಾರ ದೇಶವಾಗಿದೆ. 150 ಕ್ಕೂ ಹೆಚ್ಚು ದೇಶಗಳಿಗೆ ಅದು ಕೋಳಿ ಮಾಂಸ ಕಳುಹಿಸುತ್ತದೆ. ಆದರೆ ಭಾರತಕ್ಕೆ ಬಹಳ ಕಡಿಮೆ ಪ್ರಮಾಣ ಮಾತ್ರ ರಫ್ತು ಮಾಡುತ್ತದೆ. 2025ರಲ್ಲಿ ಬ್ರೆಜಿಲ್ ಭಾರತಕ್ಕೆ ಕೇವಲ 2.47 ಟನ್ ಕೋಳಿ ಮಾತ್ರ ಕಳುಹಿಸಿದೆ. ಅದೇ ಸಮಯದಲ್ಲಿ ಅದರ ಪ್ರಮುಖ ಮಾರುಕಟ್ಟೆಯಾದ ಯುಎಇಗೆ 4,79,900 ಟನ್‌ಗಳಷ್ಟು ಕೋಳಿ ರಫ್ತು ಮಾಡಿದೆ.
ಭಾರತಕ್ಕೇಕಿಲ್ಲ ಬ್ರೆಜಿಲ್ ಕೋಳಿ!
ಹಾಗಾದರೆ ಭಾರತಕ್ಕೆ ಹೆಚ್ಚು ಕೋಳಿ ಏಕೆ ಬರುತ್ತಿಲ್ಲ? ಮುಖ್ಯ ಕಾರಣ ಸುಂಕ. ಭಾರತವು ಕೋಳಿ ತುಂಡುಗಳ ಮೇಲೆ 100% ಸುಂಕ ಮತ್ತು ಸಂಪೂರ್ಣ ಕೋಳಿ ಮೇಲೆ 30% ಸುಂಕ ವಿಧಿಸಿದೆ. ಇದರಿಂದ ಬ್ರೆಜಿಲ್‌ನ ಕೋಳಿ ಭಾರತದಲ್ಲಿ ದುಬಾರಿ ಆಗುತ್ತದೆ. ಹೀಗಾಗಿ ವ್ಯಾಪಾರ ಹೆಚ್ಚಾಗಲು ಸಾಧ್ಯವಾಗುತ್ತಿಲ್ಲ.
ಸಚಿವ ಕಾರ್ಲೋಸ್ ಪ್ರಕಾರ
ಬ್ರೆಜಿಲ್ ಕೃಷಿ ಸಚಿವ ಕಾರ್ಲೋಸ್ ಅವರ ಪ್ರಕಾರ, ಭಾರತ ಮತ್ತು ಬ್ರೆಜಿಲ್ ವ್ಯಾಪಾರವನ್ನು ವಿಸ್ತರಿಸುವ ಬಗ್ಗೆ ಚರ್ಚೆ ನಡೆಸಿವೆ. ಬ್ರೆಜಿಲ್ ಭಾರತದಿಂದ ದಾಳಿಂಬೆ ಮತ್ತು ಮಕಾಡಾಮಿಯಾ ಬೀಜಗಳನ್ನು ಆಮದು ಮಾಡಲು ಸಿದ್ಧವಾಗಿದೆ. ಪ್ರತಿಯಾಗಿ ಬ್ರೆಜಿಲಿಯನ್ ಕೋಳಿ ಮತ್ತು ಯೆರ್ಬಾ ಮೇಟ್‌ಗೆ ಅವಕಾಶ ಹೆಚ್ಚಿಸಲು ಬಯಸುತ್ತಿದೆ. ABPA ಸಂಸ್ಥೆ ಕಡಿಮೆ ಅಥವಾ ಶೂನ್ಯ ಸುಂಕದೊಂದಿಗೆ ನಿರ್ದಿಷ್ಟ ಪ್ರಮಾಣದ ಕೋಳಿ ಆಮದು ಮಾಡಲು ವಿಶೇಷ ಕೋಟಾ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದೆ. ಆದರೆ ಭಾರತ ಸರ್ಕಾರದ ಅಂತಿಮ ನಿರ್ಧಾರ ಇನ್ನೂ ಸ್ಪಷ್ಟವಾಗಿಲ್ಲ.
ಬ್ರೆಜಿಲಿಯನ್ ಕೋಳಿ ಏಕೆ ಪ್ರಸಿದ್ಧ?
ಮೊದಲನೆಯದಾಗಿ, ಅದರ ಗುಣಮಟ್ಟ ಉತ್ತಮವಾಗಿದೆ. ಸ್ವಚ್ಛತೆ, ಸುರಕ್ಷತೆ ಮತ್ತು ಜೈವಿಕ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತದೆ. ಎರಡನೆಯದಾಗಿ, ಉತ್ಪಾದನಾ ವೆಚ್ಚ ಕಡಿಮೆ ಇರುವುದರಿಂದ ಅದು ಕೈಗೆಟುಕುವ ಬೆಲೆಯಲ್ಲಿ ಸಿಗುತ್ತದೆ. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಅದು ಜನಪ್ರಿಯವಾಗಿದೆ. ಭಾರತ ಮತ್ತು ಬ್ರೆಜಿಲ್ ನಡುವಿನ ಒಟ್ಟು ವ್ಯಾಪಾರ 2025ರಲ್ಲಿ 15 ಬಿಲಿಯನ್ ಡಾಲರ್ ತಲುಪಿದೆ. ಇದು ಹಿಂದಿನ ವರ್ಷಕ್ಕಿಂತ 25% ಹೆಚ್ಚು. 2030ರೊಳಗೆ ಇದನ್ನು 20 ಬಿಲಿಯನ್ ಡಾಲರ್‌ಗೆ ಹೆಚ್ಚಿಸುವ ಗುರಿ ಇರುವುದು ತಿಳಿದುಬಂದಿದೆ.
ಟ್ಯಾರಿಫ್ ಕಡಿಮೆಯಾದರೇ ಭಾರತದಲ್ಲಿ ಕೋಳಿ ಲಭ್ಯತೆ!
ಒಟ್ಟಿನಲ್ಲಿ, ಸುಂಕ ಕಡಿಮೆಯಾದರೆ ಬ್ರೆಜಿಲಿಯನ್ ಕೋಳಿ ಭಾರತದಲ್ಲಿ ಹೆಚ್ಚು ಲಭ್ಯವಾಗಬಹುದು. ಇದರಿಂದ ಗ್ರಾಹಕರಿಗೆ ಹೊಸ ಆಯ್ಕೆಗಳು ಸಿಗಬಹುದು. ಆದರೆ ದೇಶೀಯ ಕೋಳಿ ಸಾಕಾಣಿಕೆ ಉದ್ಯಮದ ಮೇಲೂ ಇದರ ಪರಿಣಾಮ ಇರಬಹುದು. ಆದ್ದರಿಂದ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಗಮನಾರ್ಹವಾಗಿದೆ.