newsics.com
ಪುದುಚೇರಿ:ಖ್ಯಾತ ಮಾಡೆಲ್ ತಮ್ಮ ಕೃಷ್ಣ ವರ್ಣದಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿದ್ದ ಸ್ಯಾನ್ ರೆಚಲ್ ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ (ಜು.13) ಪುದುಚೇರಿಯಲ್ಲಿ ನಡೆದಿದೆ.
ತನ್ನ ತಂದೆಯ ಮನೆಗೆ ಹೋಗಿ ಬಂದ ನಂತರ ರಾಚೆಲ್ ಅತೀಯಾದ ಮಾತ್ರೆಗಳನ್ನು ಸೇವಿಸಿ ಸಾವಿಗೆ ಶರಣಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇತ್ತೀಚೆಗಷ್ಟೇ ವಿವಾಹವಾಗಿದ್ದ ಸ್ಯಾನ್ ರೆಚಲ್, ಮನರಂಜನಾ ಕ್ಷೇತ್ರದಲ್ಲಿನ ವರ್ಣಭೇದ ನೀತಿಯ ವಿರುದ್ಧದ ದಿಟ್ಟ ನಿಲುವಿಗೆ ಹೆಸರುವಾಸಿಯಾಗಿದ್ದರು. ತಂದೆ ಮನೆಗೆ ಆಗಮಿಸಿದ್ದ ಸ್ಯಾನ್ ದೊಡ್ಡ ಪ್ರಮಾಣದಲ್ಲಿ ನಿದ್ದೆ ಮಾತ್ರೆ ತಿಂದಿದ್ದು, ಕೂಡಲೇ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸ್ಯಾನ್ ಕೊನೆ*ಯುಸಿರೆಳೆದಿದ್ದಾರೆ.
ಆರ್ಥಿಕ ನಷ್ಟ ಮತ್ತು ವೈಯಕ್ತಿಕ ಜೀವನದ ಒತ್ತಡದ ಪರಿಣಾಮ ಸ್ಯಾನ್ ಆತ್ಮ*ಹತ್ಯೆ ಮಾಡಿಕೊಳ್ಳಲು ಕಾರಣವಾಗಿರಬಹುದು ಎಂದು ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ. ವೃತ್ತಿಜೀವನ ನಿರ್ವಹಣೆಗಾಗಿ ಆಕೆ ಇತ್ತೀಚೆಗೆ ತನ್ನ ಚಿನ್ನಾಭರಣಗಳನ್ನು ಮಾರಾಟ ಮಾಡಿರುವುದಾಗಿ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಸ್ಯಾನ್ ಡೆತ್ ನೋಟ್ ನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.