newsics.com
ಗೋವಾ ಎಂದರೇನೇ ಪ್ರವಾಸ ಪ್ರಿಯರ ಸ್ವರ್ಗ. ಗೋವಾಕ್ಕೆ ಪ್ರವಾಸ ಹೋಗುವುದೆಂದರೆ ಬಹುತೇಕರು ತುದಿಗಾಲಲ್ಲಿ ನಿಂತಿರುತ್ತಾರೆ. ರಜಾ ಕಾಲ, ನ್ಯೂಯರ್, ಬರ್ತ್‌ಡೇ ಸೆಲೆಬ್ರೇಷನ್ ಹೀಗೆ ಸಾಕಷ್ಟು ಸಂದರ್ಭದಲ್ಲಿ ಹಲವರು ಗೋವಾ ಪ್ರವಾಸ ಕೈಗೊಳ್ಳುತ್ತಾರೆ. ಬೀಚ್‌ನಲ್ಲಿ ಸುತ್ತಾಡುವುದನ್ನು ಇಷ್ಟಪಡುವವರಿಗೆ, ಪಾರ್ಟಿ ಪ್ರೇಮಿಗಳಿಗೆ ಗೋವಾ ಸಖತ್ ಇಷ್ಟವಾಗುವಂತ ತಾಣ. ಇಂತಹ ಗೋವಾದಲ್ಲಿ ಪ್ರವಾಸಿಗರನ್ನು ಸೆಳೆಯುವ ಸಾಕಷ್ಟು ಅಪೂರ್ವ ತಾಣಗಳೂ ಇವೆ. ಆದರೆ ಇಂದು ಪ್ಲಾಸ್ಟಿಕ್ ಕಸಗಳು ರಾಶಿ ಬಿದ್ದಿರುವುದನ್ನು ಹಲವು ಪ್ರವಾಸಿ ತಾಣಗಳಲ್ಲಿ ನೋಡಬಹುದು. ಈ ಭೂಮಿಯ ಸ್ವಚ್ಛತೆ ನಮ್ಮೆಲ್ಲರ ಜವಾಬ್ದಾರಿ ಎಂದು ಮರೆತಿರುವ ಜನಗಳು ಎಲ್ಲೆಂದರಲ್ಲಿ ಕಸ ಎಸೆಯುವುದಲ್ಲದೇ ಕಾಡುಪ್ರಾಣಿಗಳ ಜೀವಕ್ಕೂ ಅಪಾಯ ತರುತ್ತಿದ್ದಾರೆ. ಹಾಗೆಯೇ ಇಲ್ಲೊಂದು ಕಡೆ ಕಸ ಎಸೆದ ಪ್ರವಾಸಿಗರು ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದು, ಸ್ಥಳೀಯರು ಅವರಿಗೆ ಸರಿಯಾಗಿ ಪಾಠ ಕಲಿಸಿದ್ದಾರೆ.
ಗೋವಾದ ಬೀದಿಗಳಲ್ಲಿ ಓಡಾಡಿದ ಯುವಕರ ಗುಂಪೊಂದು ಮದ್ಯದ ಬಾಟಲಿಗಳನ್ನು ರಸ್ತೆಬದಿಯಲ್ಲಿ ಎಸೆದಿದ್ದಾರೆ. ಕಾರು ರೈಡ್ ವೇಳೆಯೇ ಎಣ್ಣೆ ಹೊಡೆದ ಈ ಹುಡುಗರು ಬಳಿಕ ಬಾಟಲನ್ನು ರಸ್ತೆ ಮೇಲೆ ಎಸೆದು ಒಡೆದಿದ್ದಾರೆ. ಇದು ಸ್ಥಳೀಯರನ್ನು ಕೆರಳಿಸಿದೆ. ಕೂಡಲೇ ಕಾರಿನಿಂದ ಇಳಿದು ಆ ಸ್ಥಳವನ್ನು ಸ್ವಚ್ಛಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಕಾರನ್ನು ತಡೆದ ಮಹಿಳೆ, ಯಾರು ಬಾಟಲ್ ಎಸೆದಿದ್ದೀರೋ ಅದನ್ನು ಅಲ್ಲಿಂದ ಎತ್ತಿ ಹೋಗುವಂತೆ ಕೇಳಿದ್ದಾರೆ. ಈ ವೇಳೆ ಮಹಿಳೆಯ ಜೊತೆ ಇನ್ನೂ ಅನೇಕ ಸ್ಥಳೀಯರು ಸೇರಿದ್ದು, ಪ್ರವಾಸಿಗರನ್ನು ಕೆಳಗಿಳಿಸಿದ ಬಾಟಲ್‌ನ್ನು ಪ್ರತಿ ಸಣ್ಣ ಚೂರುಗಳನ್ನು ಕೂಡ ಅವರಿಂದ ಹೆಕ್ಕಿಸಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
https://www.newsics.com/2025/04/13/severe-thunderstorms-expected-over-the-weekend/