newsics.com
ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಮ್ರಾ ಅವರ ಸಂಕಷ್ಟಗಳು ಮತ್ತೆ ಹೆಚ್ಚಾಗುತ್ತಿವೆ. ಕುನಾಲ್ ಕಮ್ರಾ ವಿರುದ್ಧ ಮುಂಬೈನ ಖಾರ್ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಈ ಕುರಿತು ಮಾಹಿತಿ ನೀಡಿದ ಮುಂಬೈ ಪೊಲೀಸರು ಕುನಾಲ್ ಕಮ್ರಾ ವಿರುದ್ಧ ಮೂರೂ ದೂರು ಬಂದಿದ್ದು ಅದರಂತೆ ಜಲಗಾಂವ್ ನಗರದ ಮೇಯರ್ ಖಾರ್ ಪೊಲೀಸ್ ಠಾಣೆಯಲ್ಲಿ ಮೊದಲ ದೂರು ದಾಖಲಿಸಿದ್ದರೆ. ನಾಸಿಕ್‌ನ ಇಬ್ಬರು ಹೊಟೇಲ್ ಉದ್ಯಮಿಗಳು ಮತ್ತೆ ಎರಡು ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದಾರೆ ಈ ಮೂರೂ ದೂರುಗಳನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಹೇಳಿದ್ದಾರೆ.
ಕಳೆದ ವಾರ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಾಸ್ಯನಟ ಕಮ್ರಾ ಅವರು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ದಿಲ್ ತೋ ಪಾಗಲ್ ಹೈ ಹಾಡಿನ ಸಾಲನ್ನು ಬಳಸಿ ದೇಶದ್ರೋಹಿ ಎಂದು ಟೀಕೆ ಮಾಡಿದ್ದರು. ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆ ಶಿವಸೇನಾ ಕಾರ್ಯಕರ್ತರು ರೊಚ್ಚಿಗೆದ್ದು ಮುಂಬೈನ ಸ್ಟುಡಿಯೋವನ್ನು ಧ್ವಂಸಗೊಳಿಸಿದರು.
ಘಟನೆಗೆ ಸಂಬಂಧಿಸಿ ಖಾರ್ ಠಾಣೆ ಪೊಲೀಸರು ಹಾಸ್ಯನಟನನ್ನು ಎರಡು ಬಾರಿ ವಿಚಾರಣೆಗೆ ಕರೆದರು, ಆದರೆ ವಿಚಾರಣೆಗೆ ಕಮ್ರಾ ಹಾಜರಾಗಿಲ್ಲ. ಇದಕ್ಕೂ ಮುನ್ನ ಮದ್ರಾಸ್ ಹೈಕೋರ್ಟ್ ಶುಕ್ರವಾರ ಕುನಾಲ್ ಕಮ್ರಾ ಅವರ ವಿರುದ್ಧ ದಾಖಲಾಗಿರುವ ಅನೇಕ ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿ ಸುಂದರ್ ಮೋಹನ್ ಅವರು ಷರತ್ತುಗಳೊಂದಿಗೆ ಏಪ್ರಿಲ್ 7 ರವರೆಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡುವಂತೆ ಆದೇಶಿಸಿದ್ದಾರೆ.
ಆದರೆ ಶಿವಸೇನಾ ಕಾರ್ಯಕರ್ತರು ಸ್ಟುಡಿಯೋ ಧ್ವಂಸಗೊಳಿಸಿದ ಕುರಿತು ದೂರು ನೀಡಿದ್ದು ಇದಕ್ಕೆ ಸಂಬಂಧಿಸಿ ಪೊಲೀಸರು ಶಿವಸೇನಾ ಪದಾಧಿಕಾರಿ ರಾಹುಲ್ ಕನಲ್ ಸೇರಿದಂತೆ 11 ಮಂದಿ ಇತರರನ್ನು ಬಂಧಿಸಿದ್ದಾರೆ.
ಇದೀಗ ಕಮ್ರಾ ವಿರುದ್ಧ ಮುಂಬೈನ ಖಾರ್ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.