newsics.com
ಬೆಂಗಳೂರು: ಬೆಂಗಳೂರು ಅಂತರಾಷ್ಟ್ರೀಯ ಸಿನಿಮಾ ಉತ್ಸವದ ಉದ್ಘಾಟನೆ ಇಂದು (ಮಾರ್ಚ್ 01) ವಿಧಾನಸೌಧದ ಮುಂಭಾಗದಲ್ಲಿ ನಡೆದಿದೆ.
ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದ ಉದ್ಘಾಟನೆ ಮಾಡಿದ್ದಾರೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ, ಹಲವು ಸಚಿವರು ಸೇರಿದಂತೆ ನಟರಾದ ಶಿವರಾಜ್ ಕುಮಾರ್, ಚಿತ್ರೋತ್ಸವದ ರಾಯಭಾರಿ ನಟ ಕಿಶೋರ್, ನಟಿ ಪ್ರಿಯಾಂಕಾ ಮೋಹನ್ ಇನ್ನೂ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಚಲನಚಿತ್ರೋತ್ಸವದ ಕೈಪಿಡಿ ಲಾಂಚ್ ಮಾಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಶಿವಣ್ಣ, ‘ಚಲನಚಿತ್ರೋತ್ಸವಕ್ಕೆ ಪ್ರತಿ ವರ್ಷವೂ ಬರುತ್ತಲೇ ಇರುತ್ತೇನೆ. ಕಳೆದ ವರ್ಷ ಬರಲಾಗಿರಲಿಲ್ಲ, ಇದು ನಮ್ಮ ಮನೆಯ ಹಬ್ಬದಂತೆ. ಇವತ್ತು ನಮ್ಮ ಕನ್ನಡ ಸಿನಿಮಾ ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ನಿರ್ಮಾಣವಾಗುತ್ತಿದೆ. ಅದು ಬಹಳ ಹೆಮ್ಮೆ ಎನಿಸುತ್ತದೆ. ಈ ಉತ್ಸವದ ರಾಯಭಾರಿ ಕಿಶೋರ್, ನಮ್ಮ ಹಳೆಯ ಮಿತ್ರ. ನಟಿ ಪ್ರಿಯಾಂಕಾ ಮೋಹನ್, ನಾನು ನಟಿಸಿದ ತಮಿಳು ಸಿನಿಮಾ ‘ಕ್ಯಾಪ್ಟನ್ ಮಿಲ್ಲರ್’ನಲ್ಲಿ ನಟಿಸಿದ್ದರು. ಅವರು ಇಲ್ಲಿನವರೇ’ ಎಂದು ಶಿವಣ್ಣ ಎಂದರು.
ಕೆಲವು ದಿನಗಳ ಹಿಂದೆಯಷ್ಟೆ ನನ್ನ ಶಸ್ತ್ರಚಿಕಿತ್ಸೆ ಮುಗಿಸಿಕೊಂಡು ಬಂದಿದ್ದೇನೆ. ಈ ಸಮಯದಲ್ಲಿ ನೀವು ತೋರಿದ ಪ್ರೀತಿ, ವಿಶ್ವಾಸ ನಾನು ಮರೆಯುವುದಿಲ್ಲ. ನೀವು ನೀಡಿದ ಶುಭ ಹಾರೈಕೆ, ಪೂಜೆ ಪುನಸ್ಕಾರಗಳು ನಮ್ಮನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ. ನಾಡಿದ್ದಿನಿಂದ (ಸೋಮವಾರ) ಮತ್ತೆ ಶೂಟಿಂಗ್ ಪ್ರಾರಂಭ ಮಾಡುತ್ತಿದ್ದೀನಿ. ನಿಮ್ಮೆಲ್ಲರ ಸಹಕಾರ, ಹಾರೈಕೆಗಳು ಹಿಂದಿನಂತೆಯೇ ಇರಲಿವೆ ಎಂದು ಭಾವಿಸಿದ್ದೇನೆ. ಅದೇ ಹಳೆ ಎನರ್ಜಿ, ಪವರ್ ಮೂಲಕ ಮುಂದೆ ಹೋಗಲಿದ್ದೇನೆ. ನಿಮ್ಮ ಆಶೀರ್ವಾದ ಇರುವವರೆಗೆ ನನ್ನ ಎನರ್ಜಿ ಕಡಿಮೆ ಆಗುವುದಿಲ್ಲ, ಖಂಡಿತ ಶಿಸ್ತಿನಿಂದ ಕೆಲಸ ಮಾಡುತ್ತೀನಿ’ ಎಂದರು ಶಿವಣ್ಣ