newsics.com
80ರ ದಶಕದ ಸುಂದರಿ, ‘ಪರಸಂಗದ ಗೆಂಡೆತಿಮ್ಮ’ ಸಿನಿಮಾ ನಟಿ ನಿಧನರಾಗಿದ್ದಾರೆ. ಹಿರಿಯ ನಟ ದಿವಂಗತ ಲೋಕೇಶ್ ನಟಿಸಿದ್ದ ಈ ಸಿನಿಮಾದಲ್ಲಿ ರೀಟಾ ಅಂಚನ್ ರಾಧಾಕೃಷ್ಣ ನಾಯಕಿಯಾಗಿ ಮಿಂಚಿದ್ದರು. ಆಗಿನ ಕಾಲಕ್ಕೆ ಈ ಸಿನಿಮಾದ ಹಾಡುಗಳು ಸಖತ್ ಹಿಟ್ ಕಂಡಿದ್ದವು.
ರೀಟಾ ಅಂಚನ್ ಗೆ 68 ವರ್ಷ ವಯಸ್ಸಾಗಿತ್ತು. ಕನ್ನಡ ಸಿನಿಮಾಗಳು ಮಾತ್ರವಲ್ಲದೆ ಹಿಂದಿ, ಗುಜರಾತಿ ಹಾಗೂ ಪಂಜಾಬಿ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದರು. ಇನ್ನು ರೀಟಾ ಅಂಚನ್ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಬಾಲಿವುಡ್‌ನಲ್ಲಿ ರೀಟಾ ಬದ್ನಾಂ, ಗರ್ಲ್ ಜವಾನ್ ಹೋಗಯಾ, ಆತ್ಮಾ, ಫರ್ಜ್ ಔರ್ ಪ್ಯಾರ್ ಸಿನಿಮಾಗಳಲ್ಲಿ ನಟಿಸಿದ್ದರು. ಪರಸಂಗದ ಗೆಂಡೆತಿಮ್ಮ ಸಿನಿಮಾದಲ್ಲಿ ರೀಟಾ ಮರಕಣಿ ಪಾತ್ರದಲ್ಲಿ ನಟಿಸಿದ್ದರು. ಇದಕ್ಕಾಗಿ ಅವರಿಗೆ ಅನೇಕ ಪ್ರಶಸ್ತಿಗಳು ಕೂಡಾ ಲಭಿಸಿತ್ತು.
ಹಲವು ವರ್ಷಗಳಿಂದ ತೆರೆಮರೆಗೆ ಸರಿದಿದ್ದ ಈ ನಟಿಯ ನಿಧನದ ಸುದ್ದಿ ಈಗ ಕನ್ನಡ ಸಿನಿಪ್ರಿಯರಿಗೆ ಬೇಸರ ಉಂಟು ಮಾಡಿದೆ. ನಟಿಯ ನಿಧನದ ಸುದ್ದಿಯನ್ನು ನಿರ್ದೇಶಕ ರಘುರಾಮ್ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಉದ್ಯಮಿ ರಾಧಾಕೃಷ್ಣ ಮಂಚಿಗಯ್ಯ ಅವರನ್ನು 1978ರಲ್ಲಿ ರೀಟಾ ಅಂಚನ್ ಮದುವೆಯಾಗಿದ್ದರು. ಇವರಿಗೆ ಅಭಿಷೇಕ್ ಹಾಗೂ ಐಶ್ವರ್ಯಾ ಎಂಬ ಇಬ್ಬರು ಮಕ್ಕಳು ಇದ್ದಾರೆ.